ವಿಜಯಪುರದಲ್ಲಿ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಷ್ಟೋ ವರುಷಗಳಿಂದ ಜಾರಿಯಾಗದ ಒಳ ಮೀಸಲಾತಿಯನ್ನು ಯಾವ ಸಮಾಜಕ್ಕೂ ಅನ್ಯಾಯ ಮಾಡದೇ ಅತ್ಯಂತ ವೈಜ್ಞಾನಿಕವಾಗಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕೇವಲ ಬಿಜೆಪಿ ಭರವಸೆ ನೀಡುತ್ತಲೇ ಹೋಯಿತು, ಅಧಿಕಾರಕ್ಕೆ ಬಂದರೂ ಒಳಮೀಸಲಾತಿ ಜಾರಿಗೊಳಿಸಲಿಲ್ಲ, ಆದರೆ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ, ಬಲಗೈ ಸಮುದಾಯಕ್ಕೆ ಶೇ.5.5, ಎಡಗೈ ಸಮುದಾಯಕ್ಕೆ ಶೇ.5.5. ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇ.4.5 ಮೀಸಲಾತಿ ಕಲ್ಪಿಸಲಾಗಿದೆ, ಅಲೆಮಾರಿ ಸಮುದಾಯಕ್ಕೂ ಅನ್ಯಾಯವಾಗದ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿದೆ, ಅಲೆಮಾರಿ ಸಮುದಾಯಕ್ಕೂ ನ್ಯಾಯ ದೊರಕಬೇಕು ಎಂಬುದು ನಮ್ಮ ನಿಲುವು ಕೂಡಾ ಹೌದು, ರೋಸ್ಟರ್ ಸಹ ವೈಜ್ಞಾನಿಕವಾಗಿ ಪ್ರಕ್ರಿಯೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎಂದರು.
ಎಸ್‌ಇಟಿ-ಟಿಎಸ್‌ಪಿ ಎಂಬ ವಿಶೇಷ ಯೋಜನೆಯನ್ನು ರೂಪಿಸಿದ್ದೆ ಕಾಂಗ್ರೆಸ್ ಸರ್ಕಾರ, ಎಸ್.ಸಿ.-ಎಸ್‌ಟಿ ಅನುದಾನವನ್ನು ಯಾವ ಕಾರಣಕ್ಕೂ ದುರ್ಬಳಕೆಯಾಗಿಲ್ಲ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಪಾಲಿಕೆ ಸದಸ್ಯೆ ಆರತಿ ಶಹಾಪೂರ ಮಾತನಾಡಿ, ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಸಹಿಸದೇ ಬಿಜೆಪಿ ಕೇವಲ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ, ವಿನಾಕಾರಣ ದಲಿತರ ಅನುದಾನ ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದೆ ಎಂದು ತಪ್ಪು ಕಲ್ಪನೆ ಬಿತ್ತುವ ಪ್ರಯತ್ನ ಮಾಡುತ್ತಿದೆ ಎಂದರು.
ಮುಖಂಡರಾದ ಎಂ.ಎಂ. ಮುಲ್ಲಾ, ವಸಂತ ಹೊನಮೋಡೆ, ಮಹಾದೇವ ಚಲವಾದಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

