ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಶೀಘ್ರವೇ ಸ್ಥಾಪಿಸಲು ಒತ್ತಾಯಿಸಿ ಹಾಗೂ ಸರಕಾರಿ ಆಸ್ಪತ್ರೆಗಳ ಪರವಾಗಿ ಮಂಗಳೂರಿನಲ್ಲಿ ಶಾಂತಿಯುತವಾಗಿ ಡಿವೈಎಫ್‌ಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಯುವ ಜನರು ಹಾಗೂ ಸಮಾನ ಮನಸ್ಕ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ರಾಜ್ಯ ಸರಕಾರ ಪೋಲಿಸರ ಮೂಲಕ ಬಂಧಿಸಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ತಾಲೂಕ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ತಾಲೂಕಾಧ್ಯಕ್ಷ ರಮೇಶ ಸಾಸಾಬಾಳ ತಿಳಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕ ನೀಡಿರುವ ಅವರು, ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗೆ ವಹಿಸಿಕೊಟ್ಟಿರುವ ಕರಾರು ಒಪ್ಪಂದ ರದ್ದುಗೊಳಿಸಲು, ವೆನ್ಲಾಕನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ, ಖಾಸಗೀಕರಣದ ಪಿಪಿಪಿ ಮಾದರಿ ಕೈಬಿಡಲು, ಜಯದೇವ-ಕಿದ್ವಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲು ಸ್ಥಾಪಿಸಲು, ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರತೀ ತಾಲೂಕಿಗೂ ಸಾರ್ವಜನಿಕ ತಾಲೂಕು ಆಸ್ಪತ್ರೆ ಸ್ಥಾಪಿಸುವಂತೆ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಆಗ್ರಹಿಸಿ ಉಸ್ತುವಾರಿ ಮಂತ್ರಿಗಳ ಕಛೇರಿ ಚಲೋ ನಡೆಸುತ್ತಿದ್ದವರನ್ನು ರಾಜ್ಯ ಸರಕಾರ ಬಂಧಿಸಿರುವುದು ನಾಚಿಕೆಗೇಡು ಎಂದು ಹರಿಹಾಯ್ದರು.
ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏನಾದರೂ ಜನಬದ್ಧತೆ ಮತ್ತು ಜನಪರ ಕಾಳಜಿ ಇದ್ದರೆ ಕೂಡಲೇ ಡಿವೈಎಫ್‌ಐ ಸಂಘಟನೆ ಎತ್ತಿರುವ ಬೇಡಿಕೆಗಳನ್ನು ಈಡೇರಿಸಬೇಕು. ಜನಪರವಾಗಿ ಧ್ವನಿ ಎತ್ತಿದವರನ್ನೇ ಪೋಲಿಸರ ಮೂಲಕ ಬಂಧನ ಮಾಡಿ ಧ್ವನಿ ಹತ್ತಿಕ್ಕುವ ರಾಜ್ಯ ಸರಕಾರದ ನೀತಿಗೆ ಡಿವೈಎಫ್‌ಐ ಸಂಘಟನೆ ಮಣಿಯುವುದಿಲ್ಲ. ರಾಜ್ಯ ಸರಕಾರ ಖಾಸಗೀ ಆಷ್ಪತ್ರೆಗಳ ಲಾಭಿಗೆ ಮಣಿದು ಸರಕಾರಿ ಆಷ್ಪತ್ರೆಗಳನ್ನು ಬಲಹೀನಗೊಳಿಸುತ್ತಿರುವುದು ನಾಡಿನ ಜನತೆಗೆ ಬಗೆಯುತ್ತಿರುವ ದ್ರೋಹವಾಗಿದೆ. ಆರೋಗ್ಯ ಸೌಲಭ್ಯ ಕೇಳಿದವರನ್ನು ಪೋಲಿಸರನ್ನು ಬಿಟ್ಟು ಬಂಧಿಸಲು ಮುಂದಾಗುತ್ತಿರುವ ಸರಕಾರದ ನಡೆಯನ್ನು ರಾಜ್ಯದ ಜನತೆ ಸಹಿಸುವುದಿಲ್ಲ.
ರಾಜ್ಯ ಸರಕಾರ ಡಿವೈಎಫ್‌ಐ ಸಂಘಟನೆ ಎತ್ತಿರುವ ಜನರಿಗೆ ಆರೋಗ್ಯ ಅನುಕೂಲ ಕಲ್ಪಿಸುವ ಈ ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಬಂಧಿಸಿದ ಡಿವೈಎಫ್‌ಐ ಮುಖಂಡರನ್ನು ಬೇಷರತ್ ಆಗಿ ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ತೀವ್ರತರೆನಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಡಿವೈಎಫ್‌ಐ ತಾಲೂಕ ಸಮಿತಿಯು ಎಚ್ಚರಿಸುತ್ತದೆ ಎಂದಿದ್ದಾರೆ.

