ವಿಜಯಪುರದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ರಚನೆ
ವಿಜಯಪುರ: ರಾಜ್ಯ ಮಟ್ಟದ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಮೊಟ್ಟಮೊದಲ ಬಾರಿಗೆ ವಿಜಯಪುರ ಜಿಲ್ಲೆಯಲ್ಲಿ ರಚಿಸಿ ಆಸ್ತಿತ್ವಕ್ಕೆ ತರಲಾಗಿದೆ.
ನಗರದ ಬಾಲಕರ ಸರಕಾರಿ ಪ.ಪೂ.ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಸಭೆಯಲ್ಲಿ ಒಕ್ಕೂಟ ರಚನೆಯ ನಿಧಾ೯ರ ಕೈಗೊಂಡು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ವಿಜಯಪುರ ನಗರವನ್ನು ರಾಜ್ಯ ಮಟ್ಟದ ಕೇಂದ್ರ ಕಚೇರಿಯನ್ನಾಗಿ ಇರಿಸಿಕೊಂಡು “ನಮ್ಮ ಹುದ್ದೆ- ನಮ್ಮ ಹಕ್ಕು” ಶೀರ್ಷಿಕೆಯಡಿಯಲ್ಲಿ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಆಸ್ತಿತ್ವಕ್ಕೆ ಬಂದಿದೆ. ಒಕ್ಕೂಟ ರಚನೆ ಬಗ್ಗೆ ಈಗಾಗಲೇ ಎರಡು ಮೂರು ಬಾರಿ ಸಭೆ ಜರುಗಿತ್ತು. ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಸುದೀರ್ಘ ಚರ್ಚೆ,ಪರಾಮರ್ಶೆ ನಡೆಸಿ ಅಂತಿಮವಾಗಿ ಈ ಬಗ್ಗೆ ಒಮ್ಮತದಿಂದ ಸಭೆಯಲ್ಲಿ ಪಾಲ್ಗೊಂಡಿದ್ದ ನಿವೃತ್ತ ಹಾಗೂ ಹಾಲಿ ಚಿತ್ರಕಲಾ ಶಿಕ್ಷಕರ ಬಳಗ ಅಧಿಕೃತವಾಗಿ ಅಂಗೀಕಾರದ ಮುದ್ರೆ ಒತ್ತಿ ಸಮ್ಮತಿಸಿದ್ದಾರೆ.
ಚಿತ್ರಕಲಾ ಶಿಕ್ಷಣ ವಿಷಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಕಡ್ಡಾಯಗೊಳಿಸಬೇಕು. ಇವೆರಡು ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಣ ಶಿಕ್ಷಕರು ಇರುವಂತೆ ಸರಕಾರ ಸೂಕ್ತ ಕ್ರಮ ವಹಿಸಬೇಕು. ಭವಿಷ್ಯತ್ತಿನ ನಿಟ್ಟಿನಲ್ಲಿ ರಾಜ್ಯದಾದ್ಯಂತ ಏಕರೂಪದ ಚಿತ್ರಕಲಾ ವಿಷಯದ ಪಠ್ಯ ರಚನೆಯಾಗಬೇಕು. ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ನೌಕರಿಯಲ್ಲಿ ಮೊದಲ ಅದ್ಯತೆ ನೀಡಬೇಕು. ಚಿತ್ರಕಲಾ ಶಿಕ್ಷಣ ಶಿಕ್ಷಕರಿಗೆ ಬಡ್ತಿ ನೀಡಬೇಕು ಎಂಬ ಇತ್ಯಾದಿ ಹತ್ತು ಹಲವಾರು ಅಂಶಗಳ ಬೇಡಿಕೆಗಾಗಿ ಸಂಘಟನೆಯ ಅಗತ್ಯತೆಯ ಹಿನ್ನೆಲೆಯಲ್ಲಿ ನೂತನ ಒಕ್ಕೂಟ ರಚಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಸಂಜೀವ ಬಡಿಗೇರ ತಿಳಿಸಿದರು.
ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟದ ನೂತನ ಸದಸ್ಯರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ನಿವೃತ್ತ ಚಿತ್ರಕಲಾ ಶಿಕ್ಷಕ, ಮಾಜಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಆಯ್.ಬಗಲಿ, ಅಧ್ಯಕ್ಷರಾಗಿ ಗಂಗಾಧರ ಪಾಟೀಲ, ಉಪಾಧ್ಯಕ್ಷರಾಗಿ ಎಸ್.ಎಸ್.ಮುದ್ದೇಬಿಹಾಳ, ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷರಾಗಿ ಸಂಜೀವ ಬಡಿಗೇರ, ಸಹ ಕಾರ್ಯದರ್ಶಿಯಾಗಿ ಮಾಮು ಮುಲ್ಲಾ, ನಿರ್ದೇಶಕರಾಗಿ ಎಸ್.ಸಿ.ಕೇಸರಿ, ನಯೀಮ್ ನಾಗಠಾಣ, ಕಮಲೇಶ ಭಜಂತ್ರಿ, ಎಸ್.ಎಸ್.ಅಥಣಿ, ಎಸ್.ಬಿ.ಹೊರ್ತಿ, ಎಸ್.ಎಸ್.ಬಾಳೋಲಾಗಿಡದ, ಶ್ರೀಮತಿರಾದ ಎಸ್.ಎಸ್.ಮೊಗಲಿ, ಶ್ರೀಮತಿ ಸುರೇಖಾ ರಾಟಿ, ಡಿ.ಜೆ.ಇಮನಾದ, ಕಾನೂನು ಸಲಹೆಗಾರಾಗಿ ಅಡ್ವೋಕೇಟ್ ನಾಗರಾಜ ಬಿರಾದಾರ ಹಾಗೂ ಪತ್ರಿಕಾ ಮಾದ್ಯಮ ವರದಿಗಾರರಾಗಿ (ಬಾತ್ಮಿದಾರ) ಗುಲಾಬಚಂದ ಜಾಧವ ಆಯ್ಕೆಯಾಗಿದ್ದಾರೆ.
ಚಿತ್ರಕಲೆ ಉಳವಿಗಾಗಿ ಸಂಘಟನೆ ಅಗತ್ಯ
ಸಭೆಯಲ್ಲಿ ಖ್ಯಾತ ಚಿತ್ರಕಲಾವಿದ, ನಿವೃತ್ತ ಶಿಕ್ಷಕ ಜಿ.ಎಸ್.ಭೂಸಗೊಂಡ, ಬಸವರಾಜ್ ಪಾಟೀಲ ಮಾತನಾಡಿ, ಚಿತ್ರಕಲೆ ಹಾಗೂ ವಿಶೇಷ ಕಲಾ ಶಿಕ್ಷಕರ ಉಳುವಿಗಾಗಿ ಇಂದು ಸಂಘಟನೆಯ ಅವಶ್ಯಕತೆ ಇದೆ. ಇವೆರಡನ್ನು ಉಳಿಸಿದರೆ ಮಾತ್ರ ಭವಿಷ್ಯತ್ತಿನ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆಯ ರಸಸ್ವಾದ ಉಣಿಸಬಹುದು ಎಂದರು.
ಇನ್ನೀರ್ವ ನಿವೃತ್ತ ಚಿತ್ರಕಲಾ ಶಿಕ್ಷಕ ಎಸ್.ಆಯ್.ಬಗಲಿ ಹಾಗೂ ಎಂ.ಆರ್.ಸೌದಾಗಾರ ಮಾತನಾಡಿ, ವಿಶ್ವ ಸುಂದರ ಭಾಷೆ ಛಾಪಿನ ಚಿತ್ರಕಲೆ ವಿಷಯ ದಿನೇದಿನೇ ಮರೆಯಾಗುತ್ತಿದೆ. ಅಳುವಿನಂಚಿಗೆ ಬಂದು ನಿಂತಿದೆ. ಈ ವಿಶೇಷ ವಿಷಯ ಪ್ರೌಢ ಹಂತದ ಶಿಕ್ಷಣದಿಂದ ದೂರಾಗುತ್ತಿದೆ. ಪಾರ್ಟ ಬಿ.ವಿಷಯದಲ್ಲಿ ಬರುವ ಚಿತ್ರಕಲೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಇತ್ತಿತ್ತಲಾಗಿ ಸರಕಾರಗಳು ಚಿತ್ರಕಲೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಅಧಿಕಾರಿಗಳು ಸಹ ಗೋಣಗುತ್ತಾ ತಾತ್ಸಾರ,ಅಸಡ್ಜೆ ಭಾವನೆಯಿಂದ ಕಾಣುತ್ತಿದ್ದಾರೆ. ಚಿತ್ರಕಲಾ ವಿಶೇಷ ಶಿಕ್ಷಕರ ನೇಮಕಾತಿಗೆ ಮೀನಾಮೇಶ ಎಣಿಸುತ್ತಿದ್ದಾರೆ. ಉಳಿದ ವಿಷಯಗಳಿಗೆ ಅದ್ಯತೆ ನೀಡುವಂತೆ ಕಲಾ ಶಿಕ್ಷಣಕ್ಕೂ ನೀಡಬೇಕು. ಚಿತ್ರಕಲಾ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಂತೂ ಕನಸು ಮನಸ್ಸಲ್ಲೂ ಊಹಿಸದಂತಾಗಿದೆ. ಎಂದೋ ಒಂದು ಬಾರಿ ಕಾಟಾಚಾರದ ಅಲ್ಪ ನೇಮಕಾತಿ ಆಯ್ಕೆ ಪ್ರಕ್ರಿಯೆ ನಡೆಸಿ ಕೈತೋಳೆದುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿ. ರಾಜ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸರಕಾರಿ, ಅನುದಾನಿತ ಪ್ರೌಢಶಾಲೆಗಳಿದ್ದು ಬಹುತೇಕ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರುಗಳೇ ಇಲ್ಲ. ಇಡೀ ಪ್ರೌಢ ಶಿಕ್ಷಣ ಹಂತದ ಕಲಿಕಾಸಕ್ತಿ ಮೂಡಿಸು ಚಿತ್ರಕಲೆ ಇಲ್ಲದಿದ್ದರೆ ಮಕ್ಕಳು ಎಲ್ಲಿಂದ ಕಲಾ ಹವ್ಯಾಸ, ಕಲಿಕಾಭಿರುಚಿ ಬೆಳೆಸಿಕೊಳ್ಳಬೇಕು ಎಂದು ಪ್ರಶ್ನಿಸಿದರು
ಈ ವೇಳೆ ಒಕ್ಕೂಟದ ಪದಾಧಿಕಾರಿಗಳು, ನಿವೃತ್ತ, ಹಾಲಿ ಕಲಾಶಿಕ್ಷಕರು, ಅಭಿಮಾನಿ, ಹಿತೈಷಿಗಳು ಇದ್ದರು.