ಮೂಲಸೌಕರ್ಯಗಳ ಕೊರತೆ | ರಸ್ತೆಗಳಲ್ಲಿ ಚರಂಡಿ ನೀರು | ಎಲ್ಲೆಡೆ ವ್ಯಾಪಿಸಿದ ದುರ್ವಾಸನೆ | ಸೊಳ್ಳೆಗಳ ಹಾವಳಿ | ಸಾಂಕ್ರಾಮಿಕ ರೋಗದ ಭೀತಿ
ಉದಯರಶ್ಮಿ ದಿನಪತ್ರಿಕೆ
ವರದಿ: ಮಹಾಂತೇಶ ನೂಲಾನವರ
ಸಿಂದಗಿ: ಓಟಿಗಾಗಿ ಬರುವ ಜನಪ್ರತಿನಿಧಿಗಳು ಮೂಲಭೂತ ಸೌಕರ್ಯ ಒದಗಿಸಲು ಬಾರದೆ ಇರುವುದು ಖೇದಕರ ಸಂಗತಿ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಯಂಕಂಚಿ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕನಿಷ್ಠ ಸೌಕರ್ಯಗಳ ನಡುವೆಯೇ ನಿವಾಸಿಗಳು ಬದುಕುವಂತಾಗಿದೆ.
ಚರಂಡಿ ನೀರು ರಸ್ತೆಯ ಮೇಲೆ ನಿಂತು ದೊಡ್ಡ ದೊಡ್ಡ ಗಾತ್ರದ ತಗ್ಗು ಗುಂಡಿಗಳು ಬಿದ್ದಿವೆ. ಅಲ್ಲಲ್ಲಿ ನಿರ್ಮಾಣಗೊಂಡ ಹೊಂಡಗಳಲ್ಲಿ ಕೊಳಚೆ ನೀರು ತುಂಬಿ ಚರಂಡಿಯಾಗಿ ಪರಿಣಮಿಸಿದೆ. ಇಲ್ಲಿ ವಾಸಿಸುವ ನಿವಾಸಿಗಳ ಮತ್ತು ವಾಹನ ಸವಾರರ ಸಂಚಾರಕ್ಕೆ ಅಡ್ಡಿ ಉಂಟಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ರಸ್ತೆಯಿಲ್ಲದೆ ಚರಂಡಿ ಗಬ್ಬೆದ್ದು ನಾರುತ್ತಿವೆ. ಗ್ರಾಮದ ಹಲವು ಭಾಗದಲ್ಲಿ ಸಿಸಿ ರಸ್ತೆಗಳಿಲ್ಲ. ಚರಂಡಿ ಇಲ್ಲದ ಕಾರಣ ಗ್ರಾಮದ ಕಲುಷಿತ ನೀರು ರಸ್ತೆಯ ಮೇಲೆ ಹರಿದು ಕಸ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಗೊಂಡು ಗಬ್ಬೆದ್ದು, ನಾರುತ್ತಿದೆ ಎಂದು ಸಾರ್ವಜನಿಕರಿಗೆ ಆರೋಪಿಸುತ್ತಿದ್ದಾರೆ.
ವಾರ್ಡ್ ನಂ. ೧ರಲ್ಲಿ ರಸ್ತೆಯ ಮೇಲೆ ಚರಂಡಿ ನೀರು ನಿಂತು ದುರ್ವಾಸನೆ ವ್ಯಾಪಿಸಿದೆ. ಅಲ್ಲಲ್ಲಿ ಪಕ್ಕದಲ್ಲೇ ರಾಶಿ ಗಟ್ಟಲೆ ಕಸದ ರಾಶಿ ಬಿದ್ದಿರುವುದು ಕಂಡುಬರುತ್ತದೆ. ಹೀಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೂಲ ಸೌಕರ್ಯಗಳಿಂದ ಗ್ರಾಮ ವಂಚಿತವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಗ್ರಾಮದ ಮಹಿಳೆಯರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅದು ಅರಣ್ಯ ರೋಧನವಾಗಿದೆ.
ವಿಪರೀತ ಸೊಳ್ಳೆ ಕಾಟ: ಕೊಳಚೆ ಪ್ರದೇಶದಿಂದ ಎಲ್ಲಾ ಕಡೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ. ಸೌಜನ್ಯಕ್ಕಾದರೂ ಸೊಳ್ಳೆಗಳನ್ನು ನಿಯಂತ್ರಿಸಲು ಮಾತ್ರ ಯಾವುದೇ ರೀತಿಯಿಂದ ಕ್ರಮಕೈಗೊಂಡಿಲ್ಲ. ಮುನ್ನೆಚ್ಚರಿಕೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಮಹಿಳೆಯರು ಆರೋಪಿಸಿದರು.
ಮಣ್ಣಿನಿಂದ ಕೂಡಿದ ರಸ್ತೆಗಳು: ಗ್ರಾಮದ ಬಹುತೇಕ ಒಳ ರಸ್ತೆಗಳು ಮಣ್ಣಿನಿಂದ ಕೂಡಿವೆ. ಸ್ವಲ್ಪವೇ ಮಳೆಬಿದ್ದರೂ ಬೀಳದೆ ಇದ್ದರೂ ರಸ್ತೆಗಳೆಲ್ಲ ಕೆಸರು ಗದ್ದೆಯಂತೆ ಇರುತ್ತವೆ. ೧೪ ಹಾಗೂ ೧೫ನೇ ಹಣಕಾಸು ಯೋಜನೆಯಡಿ ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಕೆಸರಿನ ನಡುವೆ ಜನರು ಓಡಾಡುವಂತಿದೆ ಎನ್ನುತ್ತಾರೆ ನಿವಾಸಿಗಳು.
ತಗ್ಗು—ಗುಂಡಿಗಳಿಂದ ಆವೃತ್ತ: ಯಂಕಂಚಿ ಗ್ರಾಮದ ಒಳ ರಸ್ತೆಗಳು ಸಂಪೂರ್ಣ ಹದಗೆಟ್ಟು ತಗ್ಗು—ಗುಂಡಿಗಳಿಂದ ಆವೃತ್ತವಾಗಿದೆ. ವಾಹನ ಸವಾರರು ಮತ್ತು ವಾರ್ಡಿನಲ್ಲಿ ವಾಸಿಸುವ ನಿವಾಸಿಗಳು ಪರದಾಡುತ್ತಿದ್ದಾರೆ. ಸೂಕ್ತ ಚರಂಡಿಗಳು ಇಲ್ಲದೇ ಕೊಳಚೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ.
ಮೇಲಾಧಿಕಾರಿಗಳು ಗಮನ ಹರಿಸಲು ಆಗ್ರಹ
“ನಮ್ಮ ವಾರ್ಡಿನ ಪರಿಸ್ಥಿತಿಯನ್ನು ಪರಿಹರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮೂರ್ನಾಲ್ಕು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂದಿಸಿದ ಮೇಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ದಾನಪ್ಪ ಡಗ್ಗಾ, ಭಾಗಣ್ಣ ಕೊಂಡಗೂಳಿ, ಅಪ್ಪಣ್ಣ ಬಿರಾದಾರ ಸಾಬವ್ವ ನಾಯ್ಕೋಡಿ, ಭಾರತಿ ಕಿರಣಗಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
“ಇತ್ತೀಚಿಗೆ ಯಂಕಂಚಿ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅದಕ್ಕೊಂದು ಖಾಯಂ ಪರಿಹಾರ ಒದಗಿಸಬೇಕು ಎಂದು ಶಾಸಕರು ಹೇಳಿದ್ದಾರೆ. ಸದ್ಯಕ್ಕೆ ತಾತ್ಕಾಲಿಕವಾಗಿ ಗರಸು ಹಾಕಿಸಿ ಚರಂಡಿ ನೀರು ನಿಲ್ಲದಂತೆ ನೋಡಿಕೊಂಡು ಸರಿ ಮಾಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ತಿಳಿಸುತ್ತೇನೆ.”
– ರಾಮು ಅಗ್ನಿ
ತಾಪಂ ಇಒ, ಸಿಂದಗಿ