ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಶಾಲೆಗಳಲ್ಲಿ ಪತ್ರಿಕೆಗಳ ಪ್ರಮುಖ ಸುದ್ದಿಗಳನ್ನು ಪ್ರತಿನಿತ್ಯ ಓದುವ ಕ್ರಮ ಕಡ್ಡಾಯ ಮಾಡಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಸ್ವಾಗತಿಸಿದೆ.
ಶಾಲೆಗಳಲ್ಲಿ ಓದುವ ಮತ್ತು ಬೋರ್ಡ್ ಮೇಲೆ ಬರೆಯುವ, ನೋಟೀಸ್ ಬೋರ್ಡ್ ನಲ್ಲಿ ಹಾಕುವ ಅಭ್ಯಾಸವು ಮಾಸುತ್ತಿದೆ.
ಮೊಬೈಲ್ ಯುಗದ ಪ್ರಭಾವದಲ್ಲಿ ಹಿಂದಿನ ಪದ್ದತಿಗಳು ಮರೆತು ಹೋಗುತ್ತಿರುವ ಈ ಹೊತ್ತಿನಲ್ಲಿ ಉತ್ತರ ಪ್ರದೇಶ ಸರ್ಕಾರ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಕಡ್ಡಾಯ ಮಾಡಿದೆ. ಇದೇ ರೀತಿಯಲ್ಲಿ ರಾಜ್ಯ ಸರ್ಕಾರ ಕೂಡ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಡಿಸೆಂಬರ್ ನಲ್ಲಿ ಸರ್ಕಾರಕ್ಕೆ ಕೆಯುಡಬ್ಲ್ಯೂಜೆ ಪತ್ರ ಬರೆದಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಿತ್ತು.
ಈ ಮನವಿಗೆ ರಾಜ್ಯ ಸರ್ಕಾರ ಮನ್ನಣೆ ನೀಡಿ, ಈ ನಿಟ್ಟಿನಲ್ಲಿ ಕೂಡಲೇ ಕ್ರಮ ತೆಗೆದುಕೊಂಡ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ.


