ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿಜಾಪುರ ಲಿಂಗಾಯತ ಡೆವಲೆಪಮೆಂಟ್ ಸೌಹಾರ್ದ ಸಹಕಾರಿ ಸಂಘ ನಿ. ಗ್ರಾಹಕರ ವಿಶ್ವಾಸ ಗಳಿಸಿ, ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ದಿ.30 ಗುರುವಾರ ಬೆ.10ಗಂ. 12ನೇ ಶಾಖೆಯನ್ನು ಆರಂಭಿಸಲಿದೆ ಎಂದು ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಸುನೀಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಜಿವರು ಮತ್ತು ಪ.ಪೂ ಕತ್ನಳ್ಳಿ ಶಿವಯ್ಯ ಮಹಾಸ್ವಾಮಿಗಳವರಿಂದ ಆರಂಭಗೊಂಡ ಬಿ.ಎಲ್.ಡಿ ಸೌಹಾರ್ದವು ಕಳೆದ ಮೂರುವರೆ ವರ್ಷದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿ, ರೂ. 1000 ಕೋಟಿಗೂ ಅಧಿಕ ವಹಿವಾಟು ನಡೆಸಿದೆ. ಆಕರ್ಷಕ ಬಡ್ಡಿ ದರಗಳೊಂದಿಗೆ ರೂ.300 ಕೋಟಿಗೂ ಅಧಿಕ ಸಾಲಗಳನ್ನು ನೀಡಲಾಗಿದೆ. ಹಿರಿಯ ನಾಗರಿಕರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ಹಾಗೂ ವಿಧವೆಯರಿಗೆ 0.5% ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಅಲ್ಲದೇ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಸೇವೆ ಒದಗಿಸುವ ಯೋಜನೆ ರೂಪಿಸಲಾಗಿದೆ ಮತ್ತು ರಾಷ್ಟ್ರೀಕೃತ ಸೇವೆಗಳಾದ ಆರ್.ಟಿ.ಜಿ.ಎಸ್ / ಎನ್.ಇ.ಎಫ್.ಟಿ ಸೌಲಭ್ಯಗಳನ್ನು ಆರಂಭಿಸಲಾಗಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ಮುಧೋಳ ನಗರದ ರೂಗಿ ಹೈಟ್ಸ್ ಕಟ್ಟಡ ಮೊದಲನೇಯ ಮಹಡಿಯಲ್ಲಿ ಆರಂಭವಾಗಲಿರುವ ಶಾಖೆಯನ್ನು ಅಬಕಾರಿ ಸಚಿವರು ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಆರ್.ಎನ್. ಸಮೂಹ ಸಕ್ಕರೆ ಸಂಸ್ಥೆ ಸಿ.ಇ.ಓ ಸಂಗಮೇಶ ನಿರಾಣಿ, ಭಕ್ತಿಶಿರೋಮಣಿ ಕರ್ಮಯೋಗಿ ಹೇಮರೆಡ್ಡಿ ಮಲ್ಲಮ್ಮ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆ ಅಧ್ಯಕ್ಷ ದಯಾನಂದ ಎಸ್.ಪಾಟೀಲ ಮತ್ತು ಮುಧೋಳ ಘಟಪ್ರಭಾ ಪತ್ತಿನ ಸೌಹಾರ್ದ ಸಹಕಾರಿ ನಿ. ಉದಯ ಸಾರವಾಡ ಹಾಗೂ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಾ.ಮೋಹನ ಬಿರಾದಾರ ಉಪಸ್ಥತರಿರಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಸುನೀಲಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

