ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಹಿಂದೂ ದೇವಸ್ಥಾನವೆಂದರೆ ಅಲ್ಲಿನ ದೇವದೇವತೆಗಾಗಿ ಪ್ರತಿಷ್ಠಾಪಿಸಲಾದ ಒಂದು ಪವಿತ್ರ ಮನೆ. ಅದು ಒಂದು ಪ್ರಾರ್ಥನೆಯ ಸ್ಥಳ ಮಾತ್ರ ಅಲ್ಲ. ವೇದ ಮಂತ್ರಗಳಿಂದ ದೇವ-ದೇವತೆಯನ್ನು ಅಲ್ಲಿ ಎಂದಿಗೂ ನೆಲೆಸಿರುವಂತೆ ಆಹ್ವಾನಿಸಿ ಪ್ರತಿಷ್ಠಾಪಿಸಲಾಗುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರು ದೇವರ ಮನೆಗೆ ಬಂದ ಅತಿಥಿಗಳಂತೆ, ಆದರೆ ಆ ಭೇಟಿಗೆ ದೇವರ ಆಹ್ವಾನವಿರಬೇಕು. ಆಗ ಆ ಭೇಟಿ ಒಂದು ತೀರ್ಥಯತ್ರೆಯಾಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹೈರಿಗೆ ಗ್ರಾಮದಲ್ಲಿ ಶ್ರೀ ರಾಮ ಒಕ್ಕಲಿಗರ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡಿರುವ ಶ್ರೀ ರಾಮ ಮಂದಿರ ಉದ್ಘಾಟನಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಇಲ್ಲಿನ ದೇವಸ್ಥಾನ ಉದ್ಘಾಟನಾ ಮಹೋತ್ಸವಕ್ಕೆ ಜನರು ಸೇರಿರುವುದನ್ನು ನೋಡಿ ಖುಷಿಯಾಗುತ್ತೆ. ರಾಮನ ಮೇಲೆ ಇಲ್ಲಿನ ಜನರಿಗೆ ಎಷ್ಟು ಭಕ್ತಿಯಿದೆ ಎಂಬುದು ತಿಳಿಯುತ್ತೆ ಎಂದು ಹೇಳಿದರು.
ಇದಕ್ಕೂ ಮುನ್ನ ಬುಧವಾರ ಬೆಳಗ್ಗೆ 5.30ರ ಬ್ರಾಹ್ಮಿ ಮುಹೂರ್ತದಲ್ಲಿ ಸಕಲೀಕರಣ ಪೂರ್ವಕ ನಂಧಿಮಂಗಳ, ಧ್ವಜಾರೋಹಣ , ವಾದ್ಯಪೂಜೆ, ನೆರವೇರಿಸಲಾಯಿತು.
ಹೈರಿಗೆ ಗ್ರಾಮಸ್ಥರು ಒಟ್ಟಾಗಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.

