ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಮಾರ್ಗವಾಗಿ ಹರಿಯುವ ಘಟಪ್ರಭಾ ಎಡದಂಡೆ ಕಾಲುವೆಗೆ ಕಳೆದ ಎರಡು ದಿನಗಳಿಂದ ನೀರು ಹರಿಸಲಾಗುತ್ತಿದೆ. ಆದರೆ ಜಮಖಂಡಿ ಭಾಗದ ಗೇಟ್‌ಗಳನ್ನು ಬಂದ್ ಮಾಡಿದ್ದರಿಂದ ಆ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಮ್ಮಡ ಗ್ರಾಮದಲ್ಲಿ ನಡೆದಿದೆ.
ಬೇಸಿಗೆಯ ಪ್ರಯುಕ್ತ ಜನ ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಜಿಎಲ್‌ಬಿಸಿ ಕಾಲುವೆ ಮೂಲಕ ಪ್ರತಿದಿನ ೨೪ ಕ್ಯುಸೆಕ್ ನೀರು ಹರಿಸಲಾಗುತಿದ್ದು ನೀರು ಗ್ರಾಮದ ಕಾಲುವೆ ತಲುಪುತಿದ್ದಂತೆಯೇ ಕುಡಚಿ, ಹಾರೂಗೇರಿ ಭಾಗದ ರೈತರು ಇಲ್ಲಿನ ಜಮಖಂಡಿ ಕಾಲುವೆಯ ನಾಲ್ಕೂ ಗೇಟ್‌ಗಳನ್ನು ಬಂದ್ ಮಾಡಿ ತಮ್ಮ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವಂತೆ ನೋಡಿಕೊಂಡಿದ್ದರು. ನಂತರ ಜಮಖಂಡಿ ಭಾಗದ ರೈತರು ಸ್ಥಳಕ್ಕೆ ಆಗಮಿಸಿ ಗೆಟ್ ಗಳನ್ನು ತೆರೆದು ಜಮಖಂಡಿ ಭಾಗಕ್ಕೆ ನೀರು ಹರಿಸಲು ಪ್ರಯತ್ನಿಸಿದರೂ ಕುಡಚಿ, ಹಾರೂಗೇರಿ ಭಾಗದ ರೈತರು ಅವಕಾಶ ನೀಡಲಿಲ್ಲ. ನಂತರ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರರನ್ನು ಸಂಪರ್ಕಿಸಿ ತಮ್ಮ ಭಾಗಕ್ಕೆ ನೀರು ಹರಿಸುವ ವ್ಯವಸ್ಥೆ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಸಿದ್ದು ಕೊಣ್ಣೂರ ಸಂಬಂದಿಸಿದ ಅಧಿಕಾರಿಗಳಿಗೆ ಹಾಗೂ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೆ ಜಮಖಂಡಿ ಕಾಲುವೆಯ ಗೆಟ್‌ಗಳನ್ನು ತೆರೆದು ನೀರು ಹರಿಸಬೇಕು ಇಲ್ಲದಿದ್ದಲ್ಲಿ ನಮ್ಮ ಭಾಗದ ರೈತರನ್ನು ಸೇರಿಸಿ ನಾವೇ ಗೇಟ್ಗಳನ್ನು ತೆರೆಯಬೇಕಾಗುತ್ತದೆ ಎಂದು ತಿಳಿಸಿದರು. ಸಮಸ್ಯೆಯ ತೀವೃತೆ ಅರಿತ ಡಿವೈಎಸ್ಪಿ ತಕ್ಷಣ ಪೋಲಿಸ್ ಕಾವಲಿನಲ್ಲಿಯೇ ಜಮಖಂಡಿ ಕಾಲುವೆಯ ಗೇಟ್ ಗಳನ್ನು ತೆರೆದು ಆ ಭಾಗಕ್ಕೆ ನೀರು ಹರಿಸಲಾಯಿತು. ಇನ್ನೂ ಎಂಟು ದಿನಗಳ ಕಾಲ ಈ ಭಾಗಕ್ಕೆ ಹರಿಯಲಿರುವ ನೀರು ಎಲ್ಲ ಭಾಗಕ್ಕೆ ಸಮರ್ಪಕವಾಗಿ ಹರಿಯುವಂತೆ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ರೈತರು, ನಾಗರಿಕರು ಆಗ್ರಹಿಸಿದ್ದಾರೆ.

