ಉದಯರಶ್ಮಿ ದಿನಪತ್ರಿಕೆ
ವರದಿ: ಪರಮೇಶ್ವರ ಎಸ್.ಗದ್ಯಾಳ
ತಿಕೋಟಾ: ಬಡತನ ಕುಟುಂಬ, ಚಿಕ್ಕ ಸಂಸಾರ, ಇರುವ ಒಂದು ಎಕರೆ ತೋಟದಲ್ಲಿ ಕಷ್ಟದ ಜೀವನ ನಡೆಸುತ್ತಾ ಇರುವ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಬೌರಮ್ಮ ಹಾಗೂ ರಾಮಣ್ಣಾ ಭೀಮಣ್ಣಾ ಗಗನಮಾಲಿ ದಂಪತಿಯ ಪುತ್ರ ಈ ಬಾರಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 599 ಅಂಕ ಪಡೆದು ಶೆ. 95.84 ಅಂಕ ಪಡೆದು ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ಗ್ರಾಮದ ಕೀರ್ತಿ ಹೆಚ್ಚಿಸಿದ್ದಾನೆ.
ತಂದೆ ತಾಯಿಯೊಂದಿಗೆ ಪ್ರತಿದಿನ ಕೃಷಿ ಕಾಯಕ ಹಾಗೂ ರಜೆ ದಿನಗಳಲ್ಲಿ ಎಮ್ಮೆ ಕಾಯುವ ಕಾಯಕ ಮಾಡುತ್ತಾ ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠಗಳನ್ನು ಅಚ್ಚುಕಟ್ಟಾಗಿ ಅಂದಿನ ಅಭ್ಯಾಸ ಅಂದೇ ಮುಗಿಸುತ್ತಿದ್ದನು. ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಅಭ್ಯಾಸ ಮಾಡುತ್ತಾ ಇದ್ದ ಈತ ಕಠಿಣ ವಿಷಯಗಳನ್ನು ಹಾಗೂ ಅರ್ಥವಾಗದ ವಿಷಯಗಳನ್ನು ಪದೇ ಪದೇ ಓದಿ ಪುನರ್ಮನನ ಮಾಡಿಕೊಂಡು ಸಂಪೂರ್ಣ ವಿಷಯ ಮನಕ್ಕೆ ಮುಟ್ಟುವವರೆಗೂ ತನ್ನ ದೈನಂದಿನ ಅಭ್ಯಾಸ ಮಾಡುತ್ತಾ ಪರೀಕ್ಷಾ ತಯಾರಿ ನಡೆಸುತ್ತಿದ್ದನು.
ಕುಟುಂಬಕ್ಕೆ ಒಂದೇ ಕೋಣೆ: ಮಕ್ಕಳು ಓದಿ ಮುಂದೆ ಬರಲಿ ಎಂದು ಹಲವು ಪಾಲಕರು ಪ್ರತ್ಯೇಕ ಓದುವ ಕೊಠಡಿ ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸಿರುತ್ತಾರೆ. ಆದರೆ ವಿಕಾಸನ ಕುಟುಂಬಕ್ಕೆ ಇರುವದು ಒಂದೇ ಕೋಣೆ, ತಂದೆ ತಾಯಿ, ಇಬ್ಬರೂ ಅಣ್ಣಂದಿರರು ಸೇರಿ ಒಟ್ಟು ಐದು ಜನ ಈ ಕೋಣೆಯಲ್ಲಿ ವಾಸ ಮಾಡುತ್ತಾರೆ. ಓದಲು ಯಾವುದೇ ಸೌಲಭ್ಯ ಇಲ್ಲದಿದ್ದರೂ ಕಷ್ಟದ ಮಧ್ಯದಲ್ಲೇ ಕಠಿಣ ಪರಿಶ್ರಮ ನಿರಂತರ ಓದಿನಿಂದ ಈ ಸಾಧನೆ ಮಾಡಿದ್ದು ವಿಶೇಷ.
ಸಹೋದರರೇ ಸ್ಪೂರ್ತಿ: ಈತನ ಸಹೋದರ ರಾಕೇಶ ಆರು ವರ್ಷಗಳ ಹಿಂದೆ ಶೇ. 94.50 ಅಂಕ ಪಡೆದು ಇದೇ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದನು. ಇನ್ನೊಬ್ಬ ಸಹೋದರ ಆದರ್ಶ ಮೂರು ವರ್ಷದ ಹಿಂದೆ ಶೇ.92 ಅಂಕ ಪಡೆದು ಶಾಲೆಗೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದನು. ಈ ಸಹೋದರರ ಪಟ್ಟ ಕಷ್ಟ, ಶ್ರಮ ನಿರಂತರ ಓದುವ ಹವ್ಯಾಸ ಇವರು ಪಡೆದ ಅಂಕಗಳನ್ನು ಮಾದರಿಯಾಗಿಟ್ಟುಕೊಂಡು ಅವರಿಗಿಂತ ಒಂದು ಅಂಕವಾದರೂ ಹೆಚ್ಚಿಗೆ ಪಡೆದುಕೊಂಡೆ ತೀರುತ್ತೇನೆ ಎಂಬ ವಿಶ್ವಾಸವನ್ನು ಫಲಿತಾಂಶ ಬರುವ ಮುಂಚೆಯೆ ಕುಟುಂಬದವರಿಗೆ ತಿಳಿಸಿದ್ದನಂತೆ. ಸಧ್ಯ ಅಣ್ಣಂದಿರರ ದಾಖಲೆ ಫಲಿತಾಂಶ ಹಿಂದಿಕ್ಕಿ ಶಾಲೆ ಪಡೆದುಕೊಂಡ ಈ ಹಿಂದಿನ ಎಲ್ಲ ದಾಖಲೆಯ ಫಲಿತಾಂಶ ಹಿಂದಿಕ್ಕಿ ಇತನೇ ಶಾಲೆಗೆ ಹೆಚ್ಚಿನ ಅಂಕ ಗಳಿಸಿದ ವಿಧ್ಯಾರ್ಥಿಯಾಗಿದ್ದಾನೆ.
ವಿಕಾಸ ಗೆ ಐಪಿಎಸ್ ಗುರಿ
ಸಹೋದರರು ಹೆಚ್ಚು ಅಂಕ ಪಡೆದುಕೊಂಡು ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡಂತೆ ವಿಕಾಸ ಕೂಡಾ ಪಿಯುಸಿ ಹಂತವನ್ನು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ಪದವಿ ಪೂರೈಸಿ ಐಪಿಎಸ್ ಮಾಡುವ ಗುರಿ ಹೊಂದಿದ್ದಾನೆ.
“ವಿಕಾಸ ನಮ್ಮ ಶಾಲೆಯ ಪ್ರತಿಭಾನ್ವಿತ ವಿಧ್ಯಾರ್ಥಿ, ಈತನ ಕಠಿಣ ಶ್ರಮ ಹಾಗೂ ನಿರಂತರ ಓದು ಇವನ ಸಾಧನೆಗೆ ಸ್ಪೂರ್ತಿ. ಪ್ರತಿ ವಿಷಯಗಳನ್ನು ದಿನಂಪ್ರತಿ ಮನನ ಮಾಡಿಕೊಂಡು ಎಲ್ಲ ವಿಷಯಗಳ ಶಿಕ್ಷಕರೊಂದಿಗೆ ನಿರಂತರ ಆಧ್ಯಯನದಲ್ಲಿ ನಿರತರಾಗಿರುತ್ತಿದ್ದನು.”
– ಎಂ.ಎಂ.ಮಕಾನದಾರ
ಮುಖ್ಯೋಪಾಧ್ಯಾಯ,
“ಮನೆಯಲ್ಲಿ ಕಡಿಮೆ ಅವಧಿ ಅಭ್ಯಾಸ ಮಾಡುತ್ತಿದ್ದೆ, ಆದರೆ ಶಿಕ್ಷಕರು ಪಾಠ ಮಾಡುವಾಗ ಗಮನವಿಟ್ಟು ಆಲಿಸಿ ವರ್ಗಕೋಣೆಯಲ್ಲೆ ಹೆಚ್ಚು ವಿಷಯ ಶಿಕ್ಷಕರಿಂದ ಅರ್ಥೈಸಿಕೊಳ್ಳುತ್ತಿದ್ದೆ.”
– ವಿಕಾಸ ಗಗನಮಾಲಿ
ಸಾಧಕ ವಿದ್ಯಾರ್ಥಿ

