ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮುಸ್ಲಿಂ ಸಮುದಾಯದ ಪ್ರತಿಯೊಬ್ಬರಿಗೂ ಪವಿತ್ರ ಹಜ್‌ಯಾತ್ರೆ ಪರಿಶುದ್ಧಿಗೊಳಿಸುವ ಸಂದರ್ಭವಾಗಿದೆ ಎಂದು ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಅಲ್‌ಹಾಜ್ ಎಂ.ಎನ್.ನದಾಫ ಹೇಳಿದರು.
ಪಟ್ಟಣದ ಉದ್ಯಮಿ ಅಬ್ದುಲ್‌ರೆಹಮಾನ ವಡ್ಡೋಡಗಿ ಪರಿವಾರದಿಂದ ಹಜ್ ಯಾತ್ರೆಗೈದ ಹಾಗೂ ಹಜ್‌ಯಾತ್ರೆಗೆ ತೆರಳುವರಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾನವನಾಗಿ ಬದುಕಲು ಧರ್ಮ ಅವಶ್ಯವಾಗಿದೆ. ನಾವೆಲ್ಲ ಧರ್ಮವಂತರಾಗಿ ಬಾಳಬೇಕು. ಪಾಪ ಪುಣ್ಯದ ಮಹತ್ವ ಗೊತ್ತಿರಬೇಕು. ಹಜ್ ಯಾತ್ರೆಯಿಂದ ಪಾವಿತ್ರ್ಯತೆ ಹೆಚ್ಚುವುದರ ಜೊತೆಗೆ ಪರಿಶುದ್ಧತೆ ಕಂಡುಕೊಳ್ಳುತ್ತೇವೆ. ಸಮುದಾಯದ ಪ್ರತಿಯೊಬ್ಬರು ಹಜ್‌ಯಾತ್ರೆ ಕೈಕೊಳ್ಳುವುದರ ಮೂಲಕ ಪಾವನಗೊಳ್ಳಬೇಕೆಂದರು.
ಸಿಕ್ಯಾಬ್ ಪದವಿಪೂರ್ವ ಕಾಲೇಜು ಉಪನ್ಯಾಸಕ ಯು.ಎನ್.ಕುಂಟೋಜಿ ಮಾತನಾಡಿ, ಪರಮ ದಯಾಮಯಿ ದೇವರ ಕರುಣೆಗೆ ಪಾತ್ರರಾಗಲು ಆತ್ಮಶುದ್ಧಿ, ಪ್ರಾಂಜಲ ಮನಸ್ಸಿನಿಂದ ಇಸ್ಲಾಮಿನ ಐದು ಕಡ್ಡಾಯ ತತ್ವಗಳನ್ನು ಪಾಲಿಸಬೇಕು. ಅದರಲ್ಲಿ ಹಜ್‌ಯಾತ್ರೆಯೂ ಒಂದಾಗಿದೆ. ಜೀವನ ಮುಕ್ತಿಗಾಗಿ ಹಜ್ ಹಾಗೂ ಉಮ್ರಾ ಯಾತ್ರೆ ಕೈಕೊಳ್ಳುವುದು ಫಲದಾಯಕವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ವಕೀಲ ಎ.ಎಂ.ತಾಂಬೋಳಿ ಮಾತನಾಡಿ, ಹಜ್‌ಯಾತ್ರೆಯೆಂಬುದು ಅತ್ಯಂತ ಪ್ರವಿತ್ರವಾಗಿದ್ದು, ಹಜ್ ಯಾತ್ರೆಗೆ ತೆರಳುವವರಿಗೆ ಹಾಗೂ ಹಜ್ ಯಾತ್ರೆ ಕೈಕೊಂಡವರಿಗೆ ಸನ್ಮಾನ ಮಾಡಿ ಔತಣಕೂಟ ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯ ಎಂದರು.ಇದೇ ಸಂದರ್ಭದಲ್ಲಿ ೫೦ಕ್ಕೂ ಹೆಚ್ಚು ಹಜ್‌ಯಾತ್ರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂಘಟಕ ಅಬ್ದುಲ್ ರೆಹಮಾನ್ ವಡ್ಡೋಡಗಿ, ಶಿಕ್ಷಕ ಕೆ.ಆರ್.ಕೊಕಟನೂರ, ಹಸನಸಾಬ್ ವಡ್ಡೋಡಗಿ, ಡಾ.ಎಂ.ಎ.ಲಿಂಗಸೂರ, ಅಬ್ದುಲ್‌ರೆಹಮಾನ್ ಗೋಕಾಕ, ಬಂದೇನವಾಜ ಕಾಚೂರ, ರಫೀಕ ಪಾನ ಪರೋಶ, ಮುನ್ನಾ ಮಳಖೇಡ, ಇಕ್ಬಾಲ್ ಬಿಜಾಪೂರ, ಎಂ.ಎಂ.ಬೀಳಗಿ, ನಿಸ್ಸಾರ್ ಅಹಮ್ಮದ, ಹಾಜಿಮಲಂಗ ಶರ್ಪಾದೆ, ಮುನ್ನಾ ಶರ್ಪಾದೆ, ಅಯೂಬ್ ಮುಲ್ಲಾ, ಸೋಹೆಲ್ ಮುಲ್ಲಾ, ದಾವಲ್ ಯರಗಲ್, ಹೈದರ ಮುಲ್ಲಾ ಹಾಗೂ ಮುಸ್ಲಿಂ ಮುಖಂಡರು ಇದ್ದರು.

