ತನಿಖಾ ತಂಡದ ಅಧಿಕಾರಿಗಳ ಕಾರ್ಯಕ್ಷಮತೆ ಶ್ಲಾಘಿಸಿದ ಜಿಲ್ಲಾ ಪೋಲಿಸ್ ಅಧಿಕ್ಷಕ ಲಕ್ಷ್ಮಣ ನಿಂಬರಗಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಸಮೀಪದ ಅಲಿಯಾಬಾದ್ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ನಡೆದ ಭೀಕರ ಹತ್ಯೆ ಪ್ರಕರಣವನ್ನು ವಿಜಯಪುರ ಗ್ರಾಮೀಣ ಪೊಲೀಸರು ಅತಿ ಕಡಿಮೆ ಅವಧಿಯಲ್ಲಿ ಭೇದಿಸಿ 6 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೋಲಿಸ್ ಅಧಿಕ್ಷಕರಾದ ಲಕ್ಷ್ಮಣ ನಿಂಬರಗಿ ತಿಳಿಸಿದರು
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಅವರು, ದಿನಾಂಕ 14.04.2026 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ, ಗೊಡಂದೊಡ್ಡಿ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ರಾಜು ತಂ. ಬಾಪು ಖರೆ (42) ಅವರು ತಮ್ಮ ಥಾರ್ ಕಾರಿನಲ್ಲಿ ವಿಜಯಪುರದತ್ತ ಬರುತ್ತಿದ್ದ ವೇಳೆ, ಅಲಿಯಾಬಾದ್ ಇಂಡಸ್ಟ್ರಿಯಲ್ ಏರಿಯಾದ ಧರಿದೇವರ ಪೇಟೆ ಸಮೀಪ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿತ್ತು. ಅದೇ ಸಮಯದಲ್ಲಿ ಎರಡು ಬೈಕ್‌ಗಳಲ್ಲಿ ಬಂದ ಆರೋಪಿತರು ಕಾರನ್ನು ಅಡ್ಡಗಟ್ಟಿ, ಕಲ್ಲಿನಿಂದ ಹಲ್ಲೆ ನಡೆಸಿ ಬಳಿಕ ಪಿಸ್ತೂಲ್‌ನಿಂದ ಗುಂಡು ಹಾರಿಸಿ ರಾಜು ಖರೆ ಅವರನ್ನು ಕಾರಿನಲ್ಲಿಯೇ ಹತ್ಯೆ ಮಾಡಿದ್ದರು. ಈ ಕುರಿತು ಮೃತರ ಅಣ್ಣ ಸುಜೀರ ಬಾಪು ಖರೆ ನೀಡಿದ ದೂರಿನ ಮೇರೆಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಮನಗಂಡು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಅವರ ಮೇಲ್ವಿಚಾರಣೆಯಲ್ಲಿ ಇಶಿತಾ ಗುಪ್ತಾ (ಐಪಿಎಸ್ ಪ್ರೊಬೇಷನರ್), ಡಿಎಸ್ಪಿ ಟಿ.ಎಸ್. ಸುಲ್ಪಿ, ಪಿಐ ಆರ್.ಎಸ್. ಜಾನರ, ಪಿಎಸ್ಐ ವಿನೋದ ದೊಡಮನಿ, ಲಕ್ಷ್ಮೀ ದೇಗಿನಾಳ ಹಾಗೂ ಸಿಬ್ಬಂದಿಗಳನ್ನೊಳಗೊಂಡ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು.
ತನಿಖೆಯ ವೇಳೆ ದೊರೆತ ಸುಳಿವುಗಳ ಆಧಾರದ ಮೇಲೆ ಆರೋಪಿತರನ್ನು ಪತ್ತೆ ಹಚ್ಚಲಾಗಿದ್ದು, ಬಂಧಿತರಾದವರು: ಅಬುಶ್ಯಾ ಸೋಪಾನ್ ಕೊಡ್ಲೇಕರ (36), ಅಬಾಶ್ಯಾ ಬಾಳು ಮಾನೆ (35), ವಾಗೀಶ ಶಂಕರ ಪೋಳ (31), ಜಾಲಿಂದರ್ ಅಲಿಯಾಸ್ ಪೋಪಟ್ ಹಕ್ಕೆ (29), ಖಂಡೂಬಾ ಅಲಿಯಾಸ್ ಅಜೀತ್ ತಾಂಬೆ (29) ಹಾಗೂ ಮುರಗು ಅಲಿಯಾಸ್ ಮರಗು ಹಕ್ಕೆ (24) ಎಂದು ಗುರುತಿಸಲಾಗಿದ್ದು
ಆಸ್ತಿ ವಿವಾದದ ಹಿನ್ನೆಲೆ ಆರೋಪಿಗಳು ಕೊಲೆ ಮಾಡಲು ಪೂರ್ವ ಯೋಜನೆ ರೂಪಿಸಿ, ಟಿಪ್ಪರ್ ವಾಹನದ ಮೂಲಕ ಕಾರಿಗೆ ಡಿಕ್ಕಿ ಹೊಡೆಸಿ ಬಳಿಕ ಗುಂಡು ಹಾರಿಸಿ ಹತ್ಯೆ ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ತಿಳಿಸಿದರು , ಇನ್ನು ಘಟನೆ ಬಳಿಕ ಆರೋಪಿಗಳು ಬೈಕ್‌ಗಳನ್ನು ತಿಕೋಟಾ ತಾಲೂಕಿನ ಟಕ್ಕಳಕಿ ಹಾಗೂ ಸೋಲಾಪುರ ರೈಲು ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದರು.
ಬಂಧಿತರಿಂದ 2 ಅಕ್ರಮ ಕಂಟ್ರಿ ಪಿಸ್ತೂಲ್‌ಗಳು, 7 ಮೊಬೈಲ್‌ಗಳು, 2 ಮೋಟಾರ್ ಸೈಕಲ್‌ಗಳು, 1 ಟಿಪ್ಪರ್ ಹಾಗೂ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಏಪ್ರಿಲ್ 20 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮುಂದಿನ ತನಿಖೆ ಮುಂದುವರೆದಿದೆ.
ಈ ಪ್ರಕರಣವನ್ನು ತ್ವರಿತವಾಗಿ ಭೇದಿಸಿದ ತನಿಖಾ ತಂಡದ ಕಾರ್ಯಕ್ಷಮತೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

