ವಿಜಯಪುರದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ವಿಜಯಪುರ ಗ್ರಾಮೀಣ ವಲಯಕ್ಕೆ ಪ್ರಥಮ ಮತ್ತು ರಾಜ್ಯಕ್ಕೆ 7ನೇ ಸ್ಥಾನ ಪಡೆದ ಮೂರು ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಎಂಎಲ್ಸಿ ಸುನೀಲಗೌಡ ಪಾಟೀಲ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ದೊಡ್ಡ ಗುರಿಯೊಂದಿಗೆ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಕರೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿಜಯಪುರ ಗ್ರಾಮೀಣ ವಲಯಕ್ಕೆ ಪ್ರಥಮ ಮತ್ತು ರಾಜ್ಯಕ್ಕೆ 7ನೇ ಸ್ಥಾನ ಪಡೆದ ಮೂರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಎಸ್.ಎಲ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಧನೆಯ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದೀರಿ. ಮುಂಬರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಈ ಮೂಲಕ ಉತ್ತರೋತ್ತರವಾಗಿ ಸಾಧನೆಯ ಶಿಖರ ತಲುಪಬೇಕು ಎಂದು ಶಾಸಕರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ವೇಳೆ 626ಕ್ಕೆ ತಲಾ 619 ಅಂಕ ಗಳಿಸಿ ರಾಜ್ಯಕ್ಕೆ 7ನೇ ಮತ್ತು ವಿಜಯಪುರ ಗ್ರಾಮೀಣ ವಲಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳಾದ ಹೊನ್ನುಟಗಿ ಸರಕಾರಿ ಪ್ರೌಢಶಾಲೆಯ ಅರ್ಪಿತ ನಾಟೀಕಾರ, ಹೊಳೆ ಹಂಗರಗಿ ಕಲ್ಮೇಶ್ವರ ಪ್ರೌಢಶಾಲೆಯ ರಮೇಶ ತೇಲಿ ಹಾಗೂ ಇಟ್ಟಂಗಿಹಾಳ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಚೈತ್ರಾ ಬಿರಾದಾರ ಅವರನ್ನು ಸುನೀಲಗೌಡ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಗ್ರಾಮೀಣ ಬಿಇಓ ಬಸವರಾಜ ಎಸ್. ತಳವಾರ, ಶಿಕ್ಷಣ ಸಂಯೋಜಕರಾದ ವಸಂತ ಚವ್ಹಾಣ, ಎಸ್. ಎಂ. ಕಾಗವಾಡ, ವಿದ್ಯಾರ್ಥಿಗಳ ಪೋಷಕರು, ಶಾಲೆಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.

