ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯ ಸಾಧನೆ ಮಾಡಿದ್ದಾಳೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದಿ ಈ ಮಟ್ಟದ ಸಾಧನೆ ಮಾಡಿರುವ ಪ್ರಾರ್ಥನಾಳಿಗೆ ಈಗ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ವಿದ್ಯಾರ್ಥಿನಿಯ ಈ ಅಮೋಘ ಸಾಧನೆಯ ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿದ್ದ ಅಥಣಿ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪ್ರಾರ್ಥನಾಳಿಗೆ ದೂರವಾಣಿ ಕರೆ ಮಾಡಿ ಹಾರೈಸಿದರು.
“ಗ್ರಾಮೀಣ ಭಾಗದ ಪ್ರತಿಭೆಗಳು ಈ ಮಟ್ಟಕ್ಕೆ ಬೆಳೆಯುತ್ತಿರುವುದು ಅಥಣಿ ತಾಲೂಕಿಗೆ ಹೆಮ್ಮೆಯ ವಿಷಯ. ಪ್ರಾರ್ಥನಾ ಅವರ ಈ ಸಾಧನೆ ಉಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ,” ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅಥಣಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜಿ ಅವರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ, ಸಿಹಿ ತಿನ್ನಿಸಿ ಸತ್ಕರಿಸಿದರು.
“ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ನೂರಕ್ಕೆ ನೂರು ಅಂಕ ಗಳಿಸಿರುವುದು ನಮ್ಮ ಇಲಾಖೆಗೆ ಮತ್ತು ತಾಲೂಕಿಗೆ ಸಂದ ಗೌರವ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಂದೆ ನಾಗಪ್ಪ ಬಿರಾದರ್ ಪಾಟೀಲ್, ತಾಯಿ ವಿನೋದ ಬಿರಾದಾರ ಪಾಟೀಲ್ , ಸಮೂಹ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

