ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ ಸಲಹೆ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಬಿಸಿಲಿನ ಬೇಗುದಿಗೆ ಕೃಷ್ಣ ನದಿಯಲ್ಲಿನ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಹಿಪ್ಪರಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಕೂಡಾ ತೀರಾ ಕಡಿಮೆಯಾಗಿರುವುದರಿಂದ ಅಲ್ಲಿರುವ ಜಲಚರ ಪ್ರಾಣಿಗಳು ನೀರಿನಿಂದ ಹೊರಗಡೆ ಬಂದು ವಲಸೆ ಹೋಗುತ್ತಿವೆ. ಆಹಾರವನ್ನು ಅರಸಿಕೊಂಡು ಮೊಸಳೆಗಳು ರೈತರ ಹೊಲ-ಗದ್ದೆಗಳಿಗೆ ನುಸುಳುತ್ತಿವೆ. ಇದರಿಂದ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಬುಧವಾರ ಮುಂಜಾನೆ ನದಿ ಪಾತ್ರದಲ್ಲಿ ದೊಡ್ಡ ಮೊಸಳೆ ಕಂಡಿತ್ತು. ಗ್ರಾಮದ ರೈತರು ಮತ್ತು ಯುವಕರು ಒಗ್ಗೂಡಿ ಬಲೆ ಬೀಸಿ 12 ಅಡಿ ಉದ್ದದ ದೊಡ್ಡ ಮೊಸಳೆಯನ್ನು ಹಿಡಿದು ಹಗ್ಗದಿಂದ ಬಂಧಿಸಿ ವಾಹನದಲ್ಲಿ ಹಾಕಿಕೊಂಡು ಅಥಣಿಯ ಪ್ರಾದೇಶಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಶಿರಹಟ್ಟಿ ಗ್ರಾಮಸ್ಥರು ಒಗ್ಗಟ್ಟಿನಿಂದ ಹಿಡಿದಿರುವ ಈ ದೊಡ್ಡ ಗಾತ್ರದ ಮೊಸಳೆಯನ್ನು ಹಿಡಕಲ್ಲ್ ಜಲಾಶಯದ ನೀರಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ ತಿಳಿಸಿದ್ದಾರೆ.
ಕೃಷ್ಣಾ ನದಿಯಲ್ಲಿ ಹಾಗೂ ರೈತರ ಕಬ್ಬಿನ ತೋಟಗಳಲ್ಲಿ ಹಲವು ದಿನಗಳಿಂದ ಮೊಸಳೆಗಳು ಓಡಾಡುತ್ತಿವೆ. ಇದರಿಂದ ನಾಗರಿಕರಲ್ಲಿ ಭಯ ಮೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಮೊಸಳೆಗಳನ್ನು ತೆರವು ಮಾಡಬೇಕು ಎಂದು ನದಿ ಪಾತ್ರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದನ ಕರುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು
ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಅವುಗಳಿಗೆ ಆಹಾರದ ಕೊರತೆಯಾಗಿ ನೀರಿನಿಂದ ಹೊರಗಡೆ ಬರುತ್ತವೆ. ಮಾನವರು ಹೊಟ್ಟೆಪಾಡಿಗಾಗಿ ಗುಳೆ ಹೋಗುವಂತೆ ಅವು ಕೂಡ ನೀರು ಇರುವ ಸ್ಥಳಕ್ಕೆ ವಲಸೆ ಹೋಗಲು ಹೊರಗೆ ಬರುತ್ತವೆ. ಆಹಾರಕ್ಕಾಗಿ ಅವು ಎಮ್ಮೆ, ಹಸು, ಮೇಕೆ, ಇನ್ನಿತರ ಸಾಕುಪ್ರಾಣಿಗಳನ್ನ ಬೆಟೆಯಾಡುತ್ತದೆ. ಆದ್ದರಿಂದ ನದಿ ಪಾತ್ರದ ರೈತರು ಜಾಗೃತಿ ವಹಿಸಬೇಕು. ಈ ಸಂದರ್ಭದಲ್ಲಿ ಬಟ್ಟೆಯ ತೊಳೆಯಲು, ಸ್ನಾನ ಮಾಡಲು, ದನಕರುಗಳ ಮೈ ತೊಳೆಯಲು ಜನರು ನದಿ ನೀರಿಗೆ ಇಳಿಯಬಾರದು. ನದಿಯಿಂದ ಮೊಸಳೆಗಳು ಹೊರಗಡೆ ಬಂದಾಗ ನಮ್ಮ ಅರಣ್ಯ ಇಲಾಖೆ ಕಚೇರಿಗೆ ಇಲ್ಲವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಬೇಕು ಎಂದು ಪ್ರಾದೇಶಿಕ ಅರಣ್ಯ ಅಥಣಿ ವಲಯ ಅಧಿಕಾರಿ ರಾಕೇಶ ಅರ್ಜುನವಾಡ ಸಲಹೆ ನೀಡಿದ್ದಾರೆ.

