ಮೈಸೂರು ಜಿಲ್ಲೆಗೇ ಹೆಚ್.ಡಿ.ಕೋಟೆ ತಾಲೂಕು ಮೊದಲನೇ ಸ್ಥಾನ | ಆದರ್ಶ ಶಾಲೆ ವಿದ್ಯಾರ್ಥಿನಿ ವೇದಶ್ರೀ ಟಾಪರ್
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ.ಕೋಟೆ: ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಹೆಚ್.ಡಿ.ಕೋಟೆ ತಾಲೂಕು ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ತಾಲೂಕು ಶೇ. 96.80 ಫಲಿತಾಂಶದೊಂದಿಗೆ ಮೈಸೂರು ಜಿಲ್ಲೆಯಲ್ಲೆ ಪ್ರಥಮ ಸ್ಥಾನಗಳಿಸಿದೆ. ಈ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ತೆಗೆದುಕೊಂಡಿದ್ದ ವಿನೂತನ ಪ್ರಯೋಗ ಸಕ್ಸಸ್ ಕಂಡಿದೆ.
ಮಾ.18ರಿಂದ ಏ.2ರವರೆಗೆ ನಡೆದ ವಾರ್ಷಿಕ ಪರೀಕ್ಷೆಯಲ್ಲಿ 31 ಪ್ರೌಢಶಾಲೆ, 23 ಖಾಸಗಿ ಹಾಗೂ 4 ವಸತಿ ಶಾಲೆಗಳಿಂದ ಒಟ್ಟು 3369 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಹೆಚ್.ಡಿ.ಕೋಟೆ ಪಟ್ಟಣ , ಸರಗೂರು, ಹ್ಯಾಂಡ್ ಪೋಸ್ಟ್, ಡಿ.ಬಿ.ಕುಪ್ಪೆ, ಹೊಮ್ಮರಗಳ್ಳಿ, ಅಂತರಸಂತೆ, ಮಾದಾಪುರ, ಬೀಚನಹಳ್ಳಿ, ಮುಳ್ಳೂರು, ಬಿ.ಮಟಕೆರೆ ಸೇರಿದಂತೆ ಹದಿಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
2,971 ವಿದ್ಯಾರ್ಥಿಗಳು, ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 2,876 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ 95 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಪಿ.ಎಂ. ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದ ವೇದಶ್ರೀ 625ಕ್ಕೆ 618 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಬಂದಿದ್ದಾರೆ. ಪಿ.ಎಂ. ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿನಿ ಲಿಖಿತಾ ಮತ್ತು ಏಕಲವ್ಯ ವಿದ್ಯಾ ಶಾಲೆಯ ಆದಿತ್ಯಾ 625ಕ್ಕೆ 614 ಅಂಕಗಳನ್ನು ಪಡೆದು ತಾಲೂಕಿಗೆ ಎರಡನೇ ಸ್ಥಾನ ಬಂದಿದ್ದಾರೆ. ಸೇಂಟ್ ಮೇರಿಸ್ ಕಾನ್ವೆಂಟ್ ಪ್ರೌಢಶಾಲೆಯ ದರ್ಶಿನಿ ಮೂರನೇ ಸ್ಥಾನ ಪಡೆದಿದ್ದಾರೆ.
28 ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. 600ಕ್ಕಿಂತ ಹೆಚ್ಚಿನ ಅಂಕಗಳನ್ನು 28 ವಿದ್ಯಾರ್ಥಿಗಳು ಪಡೆದಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಮತ್ತು ಪ್ರಮುಖ ಘಟ್ಟ ಎನಿಸಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಳೆದ ಎರಡು ವರ್ಷಗಳಿಂದ ತಾಲೂಕು ಕೊನೆಯ ಸ್ಥಾನದಲ್ಲಿದ್ದರಿಂದ, ಶಿಕ್ಷಣ ಇಲಾಖೆ, ಸಾರ್ವಜನಿಕರು ಹಾಗೂ ಶಿಕ್ಷಣಾಸಕ್ತರಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಫಲಿತಾಂಶ ಸುಧಾರಿಸಲು ಮುಂದಾಗಿದ್ದ ಬಿಇಒ, ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಪ್ರೌಢಶಾಲೆಯ ಮುಖ್ಯಶಿಕ್ಷಕರು ಹಾಗೂ ವಿಷಯವಾರು ಶಿಕ್ಷಕರಿಗೆ ಹಲವು ಕಾರ್ಯಾಗಾರಗಳನ್ನು ನಡೆಸಿದ್ದರು. ಅದರಲ್ಲಿ ನಾನು ಓದುತ್ತಿದ್ದೇನೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ರಿಯಾಲಿಟಿ ಚೆಕ್ ನಡೆಸಿದ್ದರು. ಅಲ್ಲದೆ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಬೇಕು ಎಂದು ಶಿಕ್ಷಕರಿಗೂ ಕೂಡ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎನ್ ರಾಜು ತಾಕೀತು ಮಾಡಿದ್ದರು. ಈ ಎಲ್ಲದರ ಪರಿಣಾಮವಾಗಿ ಕಳೆದ ಸಾಲಿನಲ್ಲಿ ಕೊನೆ ಸ್ಥಾನದಲ್ಲಿದ್ದ ಹೆಚ್ ಡಿಕೋಟೆ ತಾಲೂಕು ಈ ಬಾರಿ ಮ್ಯಸೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.
ಬಾಯ್ಸ್ ಜೂನಿಯರ್ ಕಾಲೇಜು ಸರಗೂರು, ಕೆಂಚನಹಳ್ಳಿ, ಮುಳ್ಳೂರು, ಕಂಚಮಹಳ್ಳಿ, ಎಂ.ಸಿ.ತಳಲು, ದಡದಹಳ್ಳಿ, ಗಾಂಧೀನಗರ, ಜಿ.ಬಿ.ಸರಗೂರು, ಡಿ.ಬಿ.ಕುಪ್ಪೆ, ಅಂತರಸಂತೆ, ಇಟ್ನ, ಸೊಳ್ಳೇಪುರ ಸೇರಿದಂತೆ ಕಂದಲಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗಳು ಪೂರ್ಣ ಫಲಿತಾಂಶ ಪಡೆದಿವೆ. ಈ ಮೂಲಕ 13 ಸರ್ಕಾರಿ ಶಾಲೆಗಳಲ್ಲಿ ಪೂರ್ಣ ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳಾದ ಮೇಟಿಕುಪ್ಪೆಯ ಜೆಎಸ್ಎಸ್, ಎಚ್.ಡಿ.ಕೋಟೆ ಪಟ್ಟಣದ ಸೇಂಟ್ ಮೇರಿಸ್ ಶಾಲೆಗಳು ಪೂರ್ಣ ಫಲಿತಾಂಶ ಪಡೆದಿವೆ.
ಶಾಸಕರಿಂದ ಸನ್ಮಾನ :ಸಹಾಯದ ಭರವಸೆ
ಫಲಿತಾಂಶ ಹೊರಬೀಳುತ್ತಿದ್ದಂತೆ ಶಾಸಕ ಅನಿಲ್ ಚಿಕ್ಕಮಾದು ಅವರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ವೇದಶ್ರೀ ಅವರ ಹುಟ್ಟೂರು ಅಣ್ಣೂರು ಹೊಸಳ್ಳಿ ಮನೆಗೆ ತೆರಳಿ ಸನ್ಮಾನಿಸಿದರು. ಸಿಹಿ ತಿನಿಸಿ, ಶುಭಾಶಯ ಕೋರಿದರು. ಮುಂದಿನ ವಿದ್ಯಾಭ್ಯಾಸಕ್ಕೆ ಸಕಲ ರೀತಿಯಲ್ಲೂ ಸಹಾಯ ಮಾಡೋದಾಗಿ ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭಾಗ್ಯಲಕ್ಷ್ಮಿ, ನಿಂಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್ ಟಿ ಗಿರಿಗೌಡ, ಜಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ಮಹೇಶ್ ನಾಯಕ, ಹೊಸಳ್ಳಿ ಹೆಚ್ ಬಿ ಶಿವಕುಮಾರ್, ಸಹ ಶಿಕ್ಷಕರು ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ನಾರಾಯಣಸ್ವಾಮಿ, ಭೀಮಪ್ಪ, ಪ್ರಕಾಶ್, ನಾಗೇಂದ್ರ ಮುಖ್ಯ ಶಿಕ್ಷಕರು ರವೀಂದ್ರ ಬಾಬು, ಎಚ್ ಸಿ ವೇಕಟೇಶ್, ಸವಿತಾ, ಹೊಸಳ್ಳಿ ಆನಂದ, ಸ್ವಾಮಿ, ನಂಜನಾಯಕನಹಳ್ಳಿ ಮನು, ಸವಿತಾ ಸಮಾಜದ ಅಧ್ಯಕ್ಷ ರೇವಣ್ಣ, ವೆಂಕಟೇಶ್, ಕಬಿನಿ ಹೇಮಂತ್, ಸ್ವಾಮಿ ಶೆಟ್ಟಿ, ಚಿಕ್ಕಣ್ಣ ಶೆಟ್ಟಿ, ಸೇರಿಂದಂತೆ ಇನ್ನಿತರರು ಇದ್ದರು.

