ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನಲ್ಲಿ ಏಪ್ರಿಲ್ 23ರಿಂದ ಮೇ 22ರವರೆಗೆ 9ನೇ ಸುತ್ತಿನ ಉಚಿತ ಕಾಲುಬಾಯಿ (ಎಫ್‌ಎಮ್‌ಡಿ) ಜ್ವರ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಅಶೋಕಕುಮಾರ್ ರಾಠೋಡ ಅವರು 9ನೇ ಸುತ್ತಿನ ಲಸಿಕಾ ಅಭಿಯಾನದ ಭಿತ್ತಿಪತ್ರ ಬೀಡುಗೊಡೆಗೊಳಿಸಿದರು.
ತಾ.ಪಂ.ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2026-27ನೇ ಸಾಲಿನ ರಾಷ್ಟೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಈ ಅಭಿಯಾನ ನಡೆಯುತ್ತಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರೈತರಲ್ಲಿ ಮನವಿ ಮಾಡಿಕೊಂಡರು.
ಕಾಲುಬಾಯಿ ರೋಗವು ಎತ್ತು, ಹಸು, ಎಮ್ಮೆ ಸೇರಿದಂತೆ ಇತರೆ ಜಾನುವಾರುಗಳಲ್ಲಿ ಕಂಡುಬಂದರೆ ಜಾನುವಾರು ಮಾಲಿಕರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ರೋಗದಿಂದ ಗುಣಮುಖವಾದ ನಂತರ ಗರ್ಭಧಾರಣೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದ್ದು, ಹಾಲಿನ ಉತ್ಪಾದನೆಯಲ್ಲಿಯೂ ಕುಸಿತವಾಗುತ್ತದೆ ಎಂದರು, ಜಾನುವಾರಗಳ ಹಿತದೃಷ್ಟಿಯಿಂದ ಮೂರು ತಿಂಗಳಿಗಿಂತ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಂ.ಎಸ್. ಗಂಗನಳ್ಳಿ ಮಾತನಾಡಿ, ಚಡಚಣ ತಾಲೂಕಿನಲ್ಲಿ ಒಟ್ಟು 29,062 ಜಾನುವಾರುಗಳಿಗೆ ಉಚಿತ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು ಈ ಲಸಿಕೆಯನ್ನು ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತಿದ್ದು, ಒಂದು ತಿಂಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮ ಯಶಸ್ವಿಗಾಗಿ ವಿಶೇಷ ಲಸಿಕಾ ತಂಡಗಳನ್ನು ರಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಪ್ರಮೋದ್ ಹೊರ್ತಿ, ಡಾ. ಸಂಗನಗೌಡ ಬಿರಾದಾರ, ಜಾನುವಾರು ಅಧಿಕಾರಿ ಅಶೋಕ ಮಾನೆ, ಪಶುವೈದ್ಯಕೀಯ ಪರೀವಿಕ್ಷಕ ರಾಕೇಶ್ ಬಿಜ್ಜುರ, ಸಹಾಯಕ ನಿರ್ದೇಶಕ ಎಸ್.ಆರ್. ಕೊಟ್ಟಲಗಿ ಹಾಗೂ ಯೋಜನಾಧಿಕಾರಿ ಗುರುಮೂರ್ತಿ ಭಾಸರಗಿ ಉಪಸ್ಥಿತರಿದ್ದರು.

