ನೂರು ವರ್ಷಗಳ ಐತಿಹ್ಯ ಹೊಂದಿರುವ ಜಾತ್ರೆ | ಗದ್ದೆಮ್ಮ-ಲಕ್ಕಮ್ಮ ಅಕ್ಕ ತಂಗಿ ದೇವಿಗಳ ಸಮಾಗಮ | ಭವ್ಯ ಪಲ್ಲಕ್ಕಿ- ಕಳಸ ಮೆರವಣಿಗೆ
ಉದಯರಶ್ಮಿ ದಿನಪತ್ರಿಕೆ
ವರದಿ: ಗುಲಾಬಚಂದ ಜಾಧವ
ವಿಜಯಪುರ: ನೂರು ವರ್ಷಗಳ ಐತಿಹ್ಯ ಇತಿಹಾಸ ಹೊಂದಿರುವ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಶ್ರೀ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.
ಈ ಭಾಗದ ಭಕ್ತರ ಆರಾಧ್ಯದೇವಿಯಾಗಿ ಶ್ರದ್ಧಾಭಕ್ತಿಯಿಂದ ಪೂಜಿಸಲ್ಪಡುವ ಗದ್ದೆಮ್ಮದೇವಿ ಜಾಗೃತ ದೇವಿಯಾಗಿ ಭಕ್ತಗಣದ ಮನದಲ್ಲಿ ನೆಲೆಸಿದ್ದಾಳೆ. ಹೀಗಾಗಿ ಪ್ರತಿ ವರ್ಷವೂ ದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಗ್ರಾಮ ಸೇರಿದಂತೆ ವಿವಿಧೆಡೆಯಿಂದ ಜಾತ್ರಾ ಉತ್ಸವಕ್ಕೆ ಆಗಮಿಸಿದ ನೂರಾರು ಭಕ್ತ ಜನಸ್ತೋಮ ದೇವಿಯ ಆರಾಧನೆಯಲ್ಲಿ ದೈವತ್ವವನ್ನು ಕಂಡರು. ಭಕ್ತಿಪೂರಕ ನಮಿಸಿ ಹಲವರು ಧನ್ಯತೆ ಮೆರೆದರೆ ಇನ್ನೂ ಹರಿಕೆ ಹೊತ್ತ ಅನೇಕ ಜನತೆ ಭಕ್ತಿ ತರ್ಪಣದೊಂದಿಗೆ ದೇವಿಗೆ ವಿವಿಧ ಸೇವೆ ಸಮಪಿ೯ಸಿದರು. ಇಡೀ ನಾಗೂರ ಗ್ರಾಮ ಜಾತ್ರಾ ಹಬ್ಬದ ವೈವಿಧ್ಯಮಯ ವಿಶೇಷ ಸಾಮರಸ್ಯದ ವೈವಿಧ್ಯತೆಯಲ್ಲಿ ಮಿಂದೆದ್ದಿತು.
ನೂರು ವಸಂತಗಳ ಇತಿಹಾಸ ಲೇಪಿಸಿಕೊಂಡಿರುವ ಗದ್ದೆಮ್ಮದೇವಿ ಜಾತ್ರಾ ಕಳೆದ ಮೂರು ವರ್ಷಗಳ ಹಿಂದೆ ನಡೆಯುತ್ತಿದ್ದಾಗ ದೇವರ ಹೇಳಿಕೆಯೊಂದು ಕೇಳಿಬಂತು. ಆ ಹೇಳಿಕೆ ಭಕ್ತರ ಮನಾಂಗಳದಲ್ಲಿ ನಸುಳಿತು. ಆ ಹೇಳಿಕೆ ಏನೆಂದರೆ, ತಂಗಿ ಗದ್ದೆಮ್ಮದೇವಿ ಜಾತ್ರೆಯಲ್ಲಿ ಇದೇ ತಾಲೂಕಿನ ಇವಣಗಿಯ ಅಕ್ಕ ಶ್ರೀ ಲಕ್ಕಮ್ಮದೇವಿಯನ್ನು ತಂಗಿಯ ಜಾತ್ರೆಗೆ ಕರೆಸುವುದರ ಮೂಲಕ ಅಕ್ಕ-ತಂಗಿ ದೇವಿಯರನ್ನು ಒಂದೆಡೆ ಕೂರಿಸಿ ಅನನ್ಯ ಸಮಾಗಮದೊಂದಿಗೆ ಜಾತ್ರೆ ನೆರವೇರಿಸಬೇಕೆಂಬುದಾಗಿತ್ತು. ಆ ದೇವರ ಹೇಳಿಕೆಯಂತೆ ಜಾತ್ರಾ ಕಮೀಟಿ ಕಾರ್ಯಪ್ರವತ್ತವಾಗಿ ಈಗ ಪ್ರತಿ ವರ್ಷ ಈ ಅಕ್ಕ-ತಂಗಿ ದೇವಿಯರನ್ನು ಒಂದೆಡೆ ಸೇರಿಸಿ ಜಾತ್ರೆಗೆ ಚಾಲನೆ ನೀಡುತ್ತಿರುವುದು ವಿಶೇಷ.
ಭವ್ಯ ಪಲ್ಲಕ್ಕಿ-ಕಳಸ ಮೆರವಣಿಗೆ: ಗದ್ದೆಮ್ಮದೇವಿ ದೇಗುಲಕ್ಕೆ ಇವಣಗಿಯ ಶ್ರೀ ಲಕ್ಕಮ್ಮದೇವಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಮೂಲಕ ಭಕ್ತರು ಹಷೋ೯ದ್ಗಾರದಿಂದ ಕರೆತರಲಾಯಿತು. ಇವಣಗಿಯ ಲಾಯಪ್ಪ ಪೂಜಾರಿ ಹಾಗೂ ನಾಗೂರಿನ ಶರಣಬಸು ಪೂಜಾರಿ ನೇತೃತ್ವದಲ್ಲಿ ಧಾಮಿ೯ಕ ಪೂಜಾ ಕೈಂಕರ್ಯಗಳು ಜರುಗಿದವು. ಒಂದು ಪೂಜಾರಿ ಮುಂದಾಳತ್ವದ ತಂಡ ಗದ್ದೆಮ್ಮದೇವಿ ದೇಗುಲಕ್ಕೆ ಆಗಮಿಸಿ ಸಕಲ ಸಾಂಪ್ರದಾಯಿಕ ಪೂಜೆ ಸಲ್ಲಿಸಿತು.
ಯಲಗೂರಿನ ಕೃಷ್ಣಾ ನದಿಯ ನೀರನ್ನು ಕಮೀಟಿ ಸದಸ್ಯರಾದ ಶರಣಪ್ಪ ಮುಳವಾಡ ಹಾಗೂ ನೀಲಕಂಠ ಮರೋಳ ನೇತೃತ್ವದಲ್ಲಿ ಭಕ್ತರು ತೆರಳಿ ಕೃಷ್ಣೆ ಪವಿತ್ರ ಜಲ ತಂದು ಗದ್ದೆಮ್ಮದೇವಿ ಹಾಗೂ ಲಕ್ಕಮ್ಮದೇವಿ ಮೂತಿ೯,ಕಳಸ ಶುಚಿಗೊಳಿಸಿದರು.ಬಳಿಕ ದೇವಿಗಳಿಗೆ ಅಭಿಷೇಕ ಪೂಜೆಯ ನೆರವೇರಿತು.
ಗದ್ದೆಮ್ಮದೇವಿ ದೇವಿಯ ಕಳಸವನ್ನು ಕುಮಾರ ನಾಯ್ಕೋಡಿ ಹೊತ್ತಕೊಂಡು ಹಾಗೂ ಲಕ್ಕಮ್ಮದೇವಿಯ ಪಲ್ಲಕ್ಕಿಯನ್ನು ಹಣಮಂತ ವಾಲಿಕಾರ ನೇತೃತ್ವದಲ್ಲಿ ಬಸಯ್ಯ ಹಿರೇಮಠ, ಮಹೇಶ ಮರೋಳ, ಸಚಿನ ಹೆಬ್ಬಾಳ, ಮಾಂತು ಹೆಬ್ಬಾಳ ಇತರರು ದೇವಿಯ ಪಲ್ಲಕ್ಕಿ ಹೊತ್ತು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಪಾಲಕಿಯ ಪೂಜಾರಿಗಳನ್ನು ಒಳಗೊಂಡು ಭಕ್ತ ನಾರಿಲೋಕ ಕಳಸ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ನೂರಾರು ಮುತ್ತೈದೆಯರು ಗಂಗ ಸ್ಥಳಕ್ಕೆ ತಲುಪಿದ ಬಳಿಕ ಗಂಗ ಸ್ಥಳದಲ್ಲಿ ಗದ್ದೆಮ್ಮದೇವಿ ಕಳಸ ಪವಿತ್ರಗೊಳಿಸಿ ಅಲ್ಲಿಯೂ ಪೂಜಿಸಲಾಯಿತು. ನಂತರ ಲಕ್ಕಮ್ಮದೇವಿಯ ಪಾಲಕಿಯನ್ನು ಹಣಮಂತ ದೇವಸ್ಥಾನದ ಮುಂದೆ ಇರಿಸಿ ಪೂಜಿಸಿದರು. ದೇವಿ ಪೂಜಾರಿಗಳು ವಸ್ತ್ರಾಭರಣ ಹೊಂದಿದ ಉಡುಗೆಯನ್ನು ದೇವಿಗೆ ಉಡಿಸಿ ನಾಗೂರಿನ ಅಗಸಿ ಮೂಲಕ ಶ್ರೀ ದ್ಯಾಮವ್ವದೇವಿಗೆ ಭೇಟಿ ಮಾಡಿಸಿದರು.ಬಳಿಕ ಮೆರವಣಿಗೆ ಮೂಲಕ ನಾಗೂರಿನ ಶ್ರೀ ಯಮನೂರೇಶ್ವರ ದೇವಾಲಯಕ್ಕೂ ಬೇಟಿ ನೀಡಿ ಪುನಃ ಗದ್ದೆಮ್ಮದೇವಿ ದೇಗುಲಕ್ಕೆ ದೇವತೆಗಳ ಪಲ್ಲಕ್ಕಿ ಕರೆತಂದರು. ಅಪಾರ ಭಕ್ತಗಣದ ಮದ್ಯೆ ಡೋಳ್ಳಿನ ನಿನಾದ ಝೇಂಕರಿಸಿತು. ಡೋಳ್ಳು ವಾದ್ಯಗಳ ನಾದಬಡಿತ ಗ್ರಾಮದಲ್ಲಿ ಮೊಳಗಿತು.
ದೇವರ ಹೇಳಿಕೆ: ದೇವರ ಹೇಳಿಕೆ ಅಲಿಸಲು ಭಕ್ತ ವೃಂದವು ತುದಿಗಾಲಿನಲ್ಲಿ ಏಕಚಿತ್ತವಾಗಿ ನಿಂತಿತು. ಮುಂಗಾರು ಮತ್ತು ಹಿಂಗಾರು ಮಳಿಯು ಉತ್ತಮವಾಗಲಿದೆ.ಕಾಳಿನ ಬಿತ್ತನೆ ಮಾಡಿದರೆ ಅಧಿಕ ಇಳುವರಿ ರೈತರು ಪಡೆಯುತ್ತಾರೆ ಎಂಬುದು ದೇವರ ಹೇಳಿಕೆ ಕರುಣಿಸಿತು.
ಜಾತ್ರಾ ಉತ್ಸವದಂಗವಾಗಿ ಭಕ್ತರಿಗೆ ಅನ್ನ ಪ್ರಸಾದ್ ವ್ಯವಸ್ಥೆ ಇತ್ತು. ಪ್ರಸಾದದ ಸಂಪೂರ್ಣ ವೆಚ್ಚವನ್ನು ಭಕ್ತಿ ಸೇವೆ ಮೂಲಕ ನಿಂಗಪ್ಪ ಮರೋಳ, ಶ್ರವಣಕುಮಾರ ಮರೋಳ, ಶ್ರೀಶೈಲ ಹೆಬ್ಬಾಳ ಭರಿಸಿ ಧನ್ಯತೆ ಮೆರೆದರು.
ಗ್ರಾಮದ ಹಿರಿಯರಾದ ಚಂದ್ರಶೇಖರ ಮರಳ, ಶುಚಿರುಚಿ ಅಡುಗೆ ಪ್ರಸಾದ್ ವ್ಯವಸ್ಥೆ ಮಾಡಿದರು.ಗಿರಿಮಲ್ಲ ಮರೋಳ, ಶಶೀಧರ ಹೆಬ್ಬಾಳ, ಕಿರಣಕುಮಾರ ಹೆಬ್ಬಾಳ, ಸತೀಶ ಮರೋಳ ನೇತೃತ್ವದಲ್ಲಿ ಭಕ್ತರಿಗೆ ಅಚ್ಚುಕಟ್ಟಾಗಿ ಪ್ರಸಾದ ವಿತರಿಸಿದರು.
ದೇಸಾಯಿ ದಬಾ೯ರ ನಾಟಕ ಪ್ರದರ್ಶನ : ಜಾತ್ರೆ ನಿಮಿತ್ಯ ರಾತ್ರಿ ದೇಸಾಯಿ ದಬಾ೯ರ ಅಥಾ೯ತ ಕಾರಕೂನ ಕಾರಬಾರ್ ನಾಟಕ ಪ್ರದರ್ಶನಗೊಂಡಿತು. ಹಲವು ಸಾಧಕರಿಗೆ ಜಾತ್ರೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜಾತ್ರಾ ಕಮೀಟಿ ಅಧ್ಯಕ್ಷ ಶರಣಪ್ಪ ನಿಡಗುಂದಿ, ಸದಸ್ಯ ಶಿವಾನಂದ ನಾಯಿಕೋಡಿ, ಬಸವರಾಜ ಹೆಬ್ಬಾಳ, ಅಶೋಕ ಹೆಬ್ಬಾಳ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.
ಕಮೀಟಿ ಸದಸ್ಯರಾದ ಅಂಬ್ರಯ್ಯಾ ಹಿರೇಮಠ, ಗಿರೀಶ ಹೆಬ್ಬಾಳ, ಶಾಂತಪ್ಪ ನಾಯಿಕೋಡಿ, ಶಿವು ಮರೋಳ, ಪವನ ಮರೋಳ, ಅಮರ ನಿಡಗುಂದಿ ಇತರರು ಸೇರಿದಂತೆ ಗ್ರಾಮದ ಪ್ರಮುಖರು ಜಾತ್ರಾ ಮಹೋತ್ಸವ ಯಶಸ್ವಿಯಾಗಿ ವಿಜೃಂಭಣೆಯಿಂದ ನೆರವೇರಿಸಲು ಸಹಕರಿಸಿದರು.

