ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಶ್ರೀಮಂತರ ಮಕ್ಕಳು ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ ಯಾವುದೇ ಆಶ್ಚರ್ಯ ಇರಲ್ಲ. ಆದರೆ ಒಬ್ಬ ರೈತನ ಮಗ/ಮಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ ಎಂದರೆ ಇಡೀ ಗ್ರಾಮಕ್ಕೆ ಗ್ರಾಮವೇ ಸಂಭ್ರಮಪಡುತ್ತೆ. ತಂದೆ-ತಾಯಿ ಮುಖದಲ್ಲಿ ಸಾರ್ಥಕ ಭಾವನೆ ಎದ್ದು ಕಾಣುತ್ತೆ. ಕೂಲಿ ಕೆಲಸ ಮಾಡಿ ಕಷ್ಟಪಟ್ಟು ಓದಿಸಿದಕ್ಕೂ ನನ್ನ ಮಗ ಊರಿಗೆ ಕೀರ್ತಿ ತಂದಿದ್ದಾನೆ, ಶಾಲೆಗೆ ಮಾದರಿಯಾಗಿದ್ದಾನೆ ಎಂಬ ಖುಷಿ ಇಮ್ಮಡಿಯಾಗುತ್ತೆ.
ಬಡತನದಲ್ಲೂ ಕಠಿಣ ಪರಿಶ್ರಮ, ಶ್ರದ್ದೆ, ನಿರಂತರ ಪ್ರಯತ್ನ, ಶಿಕ್ಷಕರ ಮಾರ್ಗದರ್ಶನದಿಂದ ಗ್ರಾಮೀಣ ಪ್ರತಿಭೆ ಹೇಮಂತ್ ಜಿ ಉತ್ತಮ ಸಾಧನೆ ಮಾಡಿದ್ದಾರೆ. ಹೆಚ್ ಡಿ ಕೋಟೆ ತಾಲೂಕಿನ ಗಂಗಡಹೊಸಳ್ಳಿ ಗ್ರಾಮದ ಗುರುಸ್ವಾಮಿ – ಶಿಲ್ಪಾ ದಂಪತಿಯ ಪುತ್ರ ಹೇಮಂತ್ ಜಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನೂ ಪಡೆದಿದ್ದಾರೆ. ಶ್ರೀರಂಗಪಟ್ಟಣ ಪಂಪ್ ಹೌಸ್ ನಲ್ಲಿರುವ ಆರಾಧನಾ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಹೇಮಂತ್ ಜಿ 532 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.ರೈತರ ಪರ ಹೋರಾಟ ಮಾಡುತ್ತಾ ಬರುತ್ತಿರುವ ಗುರುಸ್ವಾಮಿ ಅವರ ಪುತ್ರನ ಸಾಧನೆಗೆ ರೈತ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.
“ಬಡತನವು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿ, ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸಿ ಮಾದರಿಯಾಗಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳು, ಸಣ್ಣ ರೈತರ ಮಕ್ಕಳು ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ, ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ. ಆ ಸಾಲಿಗೆ ನನ್ನ ಮಗನು ಸೇರ್ಪಡೆಯಾಗಿರುವುದು ತುಂಬಾ ಸಂತೋಷದ ವಿಷಯ.”
– ಗುರುಸ್ವಾಮಿ
ರೈತ ಮುಖಂಡರು

