ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಜೈ ಹನುಮಾನ ಯುವ ಮಿತ್ರ ಮಂಡಳಿಯವರ ನೇತೃತ್ವದಲ್ಲಿ ಪಾರಂಪರಿಕ ಕೃಷಿ ಪದ್ಧತಿ ಹಾಗೂ ಸಾವಯವ ಕೃಷಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಗ್ರಾಮೀಣ ರೈತರಿಗೆ ಉಪಯುಕ್ತ ಮಾಹಿತಿಯನ್ನು ಹಂಚುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕನ್ನೇರಿ ಮಠದ ಸ್ವಾಮಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರೈತರಿಗೆ ಮಾರ್ಗದರ್ಶನ ನೀಡಿದರು.
ಸ್ವಾಮಿಗಳು ತಮ್ಮ ಉಪನ್ಯಾಸದಲ್ಲಿ ಪಾರಂಪರಿಕ ಕೃಷಿ ವಿಧಾನಗಳ ಮಹತ್ವವನ್ನು ವಿವರವಾಗಿ ತಿಳಿಸಿದರು. ಇಂದಿನ ಕಾಲದಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಗುಣಮಟ್ಟ ಕುಸಿಯುತ್ತಿದ್ದು, ರೈತರು ಆರೋಗ್ಯ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದ್ದು, ಇದರಿಂದ ಮಣ್ಣಿನ ಆರೋಗ್ಯ ಕಾಪಾಡುವುದರ ಜೊತೆಗೆ ಉತ್ತಮ ಹಾಗೂ ಶುದ್ಧ ಬೆಳೆಯನ್ನು ಪಡೆಯಲು ಸಾಧ್ಯವೆಂದು ತಿಳಿಸಿದರು.
ಇದರ ಜೊತೆಗೆ ಎಲ್‌ಪಿಜಿ ಗ್ಯಾಸ್ ಬಳಕೆಯಿಂದ ಉಂಟಾಗುವ ಕೆಲವು ಪರಿಸರ ಹಾಗೂ ಆರೋಗ್ಯ ಸಂಬಂಧಿತ ತೊಂದರೆಗಳ ಬಗ್ಗೆ ಕೂಡ ಜಾಗೃತಿ ಮೂಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಪರ್ಯಾಯವಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು.
ರೈತರು ತಮ್ಮ ಹಳೆಯ ಪಾರಂಪರಿಕ ಜ್ಞಾನವನ್ನು ಮರುಜೀವಗೊಳಿಸಿ, ನೈಸರ್ಗಿಕ ಕೃಷಿಯತ್ತ ಗಮನ ಹರಿಸುವುದು ಇಂದಿನ ಅಗತ್ಯವೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರು ಸಿದ್ಧಲಿಂಗೇಶ್ವರ ಕಮರಿಮಠದ ಆಶೀರ್ವಚನ ಕಾರ್ಯಕ್ರಮಕ್ಕೆ ವಿಶೇಷ ಆಧ್ಯಾತ್ಮಿಕ ಮೆರುಗು ನೀಡಿತು. ಅವರ ಆಶೀರ್ವಾದಗಳು ರೈತರಿಗೆ ಧೈರ್ಯ ಹಾಗೂ ಪ್ರೇರಣೆಯಾಗಿ ಪರಿಣಮಿಸಿತು.
ಕಾರ್ಯಕ್ರಮವನ್ನು ಶಿಕ್ಷಕ ಮಲ್ಲು ಪಟ್ಟಣಶೆಟ್ಟಿ ಅವರು ಸುಗಮವಾಗಿ ನಿರೂಪಿಸಿದರು. ಆರಂಭದಲ್ಲಿ ಶಿಕ್ಷಕ ಎಸ್.ಆರ್. ಪವಾರ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕ ಸುರೇಶ ಸಂತಿ ಅವರು ವಂದನಾರ್ಪಣೆ ಸಲ್ಲಿಸಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ರೈತರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಪನ್ಯಾಸದ ಸದುಪಯೋಗ ಪಡೆದುಕೊಂಡರು. ಜೈ ಹನುಮಾನ ಯುವ ಮಿತ್ರ ಮಂಡಳಿಯ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಯಿತುˌ ಇಂತಹ ಜಾಗೃತಿ ಕಾರ್ಯಕ್ರಮಗಳು ಗ್ರಾಮೀಣ ಅಭಿವೃದ್ಧಿಗೆ ನೆರವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದೆ ಸಂದರ್ಭದಲ್ಲಿ ಗ್ರಾಮಸ್ಥರಾದ ಪರಮಗೊಂಡ ದಾನಗೌಡˌ ಮಹಾದೇವ ಕಲ್ಯಾಣಿˌ ಗುಡುಸಾಬ ಹೊನವಾಡˌ ಶಿವರುದ್ರಯ್ಯ ಬಬಲಾದಿಮಠˌ ರುದ್ರಯ್ಯ ಹಿರೇಮಠˌ ಹನಮಂತ ನ್ಯಾಮಗೌಡˌ ಧರೇಪ್ಪ ದಾನಗೌಡˌ ಸೇರಿದಂತೆ ಚಿಕ್ಕಪಡಸಲಗಿ ಸುತ್ತಮುತ್ತಲಿನ ಗ್ರಾಮಗಳಾದ ಕವಟಗಿˌ ನಾಗನೂರˌ ಹಿರೇಪಡಸಲಗಿˌ ಆಲಗೂರˌ ಕುಂಚನೂರ ಸೇರಿಂದೆ ಅನೇಕ ಗ್ರಾಮದ ಸಾರ್ವಜನಿಕರು ಪಾಲ್ಗೊಂಡಿದ್ದರು.

