ಇಂಡಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಇಂಡಿ ನಗರ ಸೇರಿದಂತೆ ತಾಲೂಕಿನ ಯಾವದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಟ್ಟೆಚ್ಚರ ವಹಿಸಬೇಕು ಮತ್ತು ತಾಲೂಕಿನ ಎಲ್ಲಾ ಕೆರೆಗಳಲ್ಲಿ ಶೇ ೫೦ ರಷ್ಟು ನೀರು ಕಾಯ್ದುಕೊಳ್ಳಬೇಕು ಎಂದು ತಾಲೂಕಾ ಆಡಳಿತಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲರು ಸೂಚಿಸಿದರು.
ಅವರು ಬುಧವಾರ ನಗರದ ತಾ.ಪಂ ಸಬಾಭವನದಲ್ಲಿ ಆಯೋಜಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ಮೈಲಾರ ಕೊಳುರಗಿ ಹಾಗೂ ಕೆಲವು ಅಡವಿ ವಸ್ತಿಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಅವುಗಳನ್ನು ತಕ್ಷಣವೇ ಬಗೆಹರಿಸಬೇಕು ಎಂದು ಸೂಚಿಸಿದರು.
ತಾಲೂಕಿನ ೧೯ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು.ಅವುಗಳಲ್ಲಿ ಸಾಕಷ್ಟು ನೀರು ಇದೆಯೋ ಇಲ್ಲವೋ ಎನ್ನುವದನ್ನು ಸತತ ನಿಗಾವಹಿಸಬೇಕು. ನೀರು ಕಡಿಮೆಯಾದರೆ ತಕ್ಷಣವೇ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯ ಮೂಲಕ ನೀರು ಹರಿಸಬೇಕು ಕೆರೆಗಳನ್ನು ತುಂಬಿಸುವ ವ್ಯವಸ್ಥೆ ಮಾಡಬೇಕೆಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಇವರಿಗೆ ತಿಳಿಸಿದರು. ಕಾಲುವೆಗೆ ನೀರು ಹರಿಯುವಾಗ ಮಧ್ಯದಲ್ಲಿ ನೀರು ಪೋಲಾಗದಂತೆ ನಿಗಾ ವಹಿಸಬೇಕು ಎಂದರು. ಕೇವಲ ಜನ ಮತ್ತು ಜಾನುವಾರುಗಳಿಗೆ ಕುಡಿಯುವದಕ್ಕಾಗಿ ನೀರು ಬಿಡಲಾಗಿದೆ ಎಂದು ಸಾರ್ವಜನಿಕರಿಗೆ ಮತ್ತು ರೈತರಿಗೆ ಮನವರಿಕೆ ಮಾಡಬೇಕೆಂದು ಸುಚನೆ ನೀಡಿದರು. ಈ ವ್ಯವಸ್ಥೆ ಜೂನ ೧೫ರ ವರೆಗೆ ನಡೆಯಬೇಕೆಂದರು.
ಜಿಲ್ಲಾಧಿಕಾರಿ ಕೆ. ಆನಂದ ಮಾತನಾಡಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ಕ್ರಮ ಜರುಗಿಸಲಾಗಿದೆ. ಎಲ್ಲಾ ಕೆರೆಗಳನ್ನು ತುಂಬಿಸಲಾಗಿದೆ.ಸಮಸ್ಯೆಯಾದರೆ ಮತ್ತೆ ಕೃಷ್ಣಾ ಕಾಲುವೆಯಿಂದ ನೀರು ಹರಿಸಲಾಗುವದು ಎಂದರು.
ವೇದಿಕೆಯಲ್ಲಿ ರಾಜ್ಯ ನಿಂಬೆ ಅಭಿವೃಧ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ಭೀಮಾಶಂಕರ ಕನ್ನೂರ, ನಗರ ಯೋಜನಾಧಿಕಾರಿ ಸೌದಾಗರ ಇದ್ದರು.
ಸಭೆಯಲ್ಲಿ ನೀರಾವರಿ, ತೋಟಗಾರಿಕೆ, ಕೃಷಿ, ಹೆಸ್ಕಾಂ, ನಗರಸಭೆ, ಪೊಲೀಸ್, ಕ್ಷೇತ್ರಶಿಕ್ಷಣಾಧಿಕಾರಿ, ಲೋಕೋಪಯೋಗಿ, ತಾಲೂಕಾ ಆರೋಗ್ಯ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

