ಪಡುವಲು ಶ್ರೀ ವಿರಕ್ತ ಮಠದ ಮಹದೇವಸ್ವಾಮಿಗಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸರಗೂರು: ಭಗವಂತ ಮತ್ತು ಭಕ್ತನ ನಡುವೆ ಅರ್ಚಕರು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಕ್ತರ ಆಶೋತ್ತರಗಳನ್ನ, ಬೇಡಿಕೆಗಳನ್ನ, ಅವರ ಮನದ ಇಚ್ಛೆಯನ್ನ, ತಮ್ಮ ಭಕ್ತಿಯ ಮೂಲಕವಾಗಿ ಭಗವಂತನಿಗೆ ಅರ್ಪಿಸುವ ಕಾರ್ಯವನ್ನು ಅರ್ಚಕರು ಮಾಡುತ್ತಿದ್ದಾರೆ ಎಂದು ಪಡುವಲು ಶ್ರೀ ವಿರಕ್ತ ಮಠದ ಅಧ್ಯಕ್ಷರಾದ ಶ್ರೀ ಮಹದೇವಸ್ವಾಮಿಗಳು ಹೇಳಿದರು.
ಪಟ್ಟಣದ ಸೌಜನ್ಯ ಗ್ಯಾಸ್ ಫ್ಯಾಕ್ಟರಿ ಸಮೀಪ ಸಂಘದ ನಿವೇಶನದಲ್ಲಿ ಹಮ್ಮಿಕೊಂಡಿದ್ದ ಶೈವಾಗಮ ರೀತ್ಯಾ ಅರ್ಚಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್ ಗೆ ಜೋತುಬಿದ್ದು, ಆಚಾರ-ವಿಚಾರಗಳನ್ನು ಮರೆಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಶಿವಾರ್ಚಕರ ಸಂಘ, ಮಕ್ಕಳಿಗೆ ಸನಾತನ ಧರ್ಮದ ಸಂಸ್ಕಾರ, ಸಂಸ್ಕೃತಿ, ಪೂಜಾ ವಿಧಿ-ವಿಧಾನ ಹೇಳಿಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮಹದೇವಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾವಡಗೆರೆಯ ಗುರುಲಿಂಗ ಜಂಗಮದೇವರ ಮಠಾಧ್ಯಕ್ಷ ನಟರಾಜುಸ್ವಾಮಿ ಮಾತನಾಡಿ, ದೇಶಕ್ಕೆ ದೊಡ್ಡಣ್ಣ ಎನಿಸಿಕೊಳ್ಳುವ ಅಮೇರಿಕಾದಲ್ಲಿ ಸಂಪತ್ತು ಇದೆ. ಆದರೆ ಸಂತೋಷ, ಪ್ರೀತಿ, ಅಭಿಮಾನ ಇಲ್ಲ. ದೇಶ-ದೇಶಗಳ ನಡುವೆ ಹೊತ್ತಿ ಉರಿಯುತ್ತಿರುವ ಈ ಮಧ್ಯೆ ಭಾರತ ದೇಶದ ಭವ್ಯತೆ ತನ್ನದೇ ಆದ ಸಂಬಂಧವನ್ನು ಕಟ್ಟಿಕೊಂಡಿದೆ. ಆ ಸಂಬಂಧಕ್ಕೆ ಮೂಲ ಸಂಸ್ಕಾರ ಅಂದ್ರೆ ಪೂಜಾ ಸಂಸ್ಕಾರದ ಪರಂಪರೆ. ಸಂಪತ್ತು ಒಂದು ಸುಖದ ಸೋಪಾನವೇ ಹೊರತು ಸಂಪತ್ತೇ ಸುಖವಲ್ಲ. ಸುಖದ ಸೋಪಾನವನ್ನ ಗಟ್ಟಿಗೊಳಿಸುವ ಕಾರ್ಯ ಮಂಗಳಕರವಾಗಿರಲು ಪೂಜೆ ಅತಿ ಮುಖ್ಯ. ಆ ಕೆಲಸವನ್ನು ಶಿವಾರ್ಚಕರ ಸಂಘ ಮಾಡುತ್ತಾ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಶಿಬಿರ ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಶಿವಾರ್ಚಕರ ಸಂಘದ ಅಧ್ಯಕ್ಷ ಡಾ. ವಿದ್ವಾನ್ ಮಲ್ಲಣ್ಣ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಣ್ಯರನ್ನು ಹಾಗೂ ವಿವಿಧ ದೇವಸ್ಥಾನಗಳ ಅರ್ಚಕರನ್ನು ಸನ್ಮಾನಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಈ ವೇಳೆ ದಡದಹಳ್ಳಿ ಮಠಾಧ್ಯಕ್ಷ ಷಡಕ್ಷರಿ ಸ್ವಾಮಿಗಳು, ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರ ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾದ ಡಾ. ಮಹದೇವಸ್ವಾಮಿರವರು, ಕರ್ನಾಟಕ ರಾಜ್ಯ ಶಿವಾರ್ಚಕರ ಸಂಘದ ಅಧ್ಯಕ್ಷ ಡಾ. ವಿದ್ವಾನ್ ಮಲ್ಲಣ್ಣ, ಮೈಸೂರು ಜಿಲ್ಲಾಧಿಕಾರಿ ಕಛೇರಿಯ ಧಾರ್ಮಿಕ ದತ್ತಿಯ ತಹಶೀಲ್ದಾರ್ ಭಾಗ್ಯ, ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ ಗೌರವಾಧ್ಯಕ್ಷ ಅಂಬಳೆ ಶಿವಣ್ಣ, ಬೋಳಪ್ಪ ಗುರೂಜಿ, ಡಾ. ಭಜರಂಗಿ ಉಮೇಶ್ , ನಂಜುಂಡಸ್ವಾಮಿ, ಜೈನ ಸಮಾಜದ ಅಧ್ಯಕ್ಷ ನಾಗರಾಜು, ಶ್ರೀ ಚಿಕ್ಕದೇವಮ್ಮ ಬೆಟ್ಟದ ಪಾರುಪತ್ತೆದಾರ ಶಾಂತಿಪುರ ಮಹದೇವಸ್ವಾಮಿ ಸೇರಿದಂತೆ ಹಲವರಿದ್ದರು.

