ಉದಯರಶ್ಮಿ ದಿನಪತ್ರಿಕೆ
ಸಿಂದಗಿ:ಧರ್ಮ ಪ್ರಚಾರ, ಸಾಮಾಜಿಕ ಸಾಮರಸ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಕನ್ನೊಳ್ಳಿ ಹಿರೇಮಠ ಜಾತಿ ಭೇದವಿಲ್ಲದೆ ಲಿಂಗದೀಕ್ಷೆ ನೀಡುವಂತಹ ಪ್ರಗತಿಪರ ಚಿಂತನೆಗಳಿಗೆ ಹೆಸರುವಾಸಿಯಾಗಿದೆ ಎಂದು ಶ್ರೀಶೈಲಂ ಪೀಠದ ಜಗದ್ಗುರು ಡಾ.ಚೆನ್ನಸಿದ್ದರಾಮ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ಸಿಂದಗಿ ತಾಲೂಕಿನ ಕನ್ನೊಳ್ಳಿ ಹಿರೇಮಠದಲ್ಲಿ ಜರುಗಿದ ಜಗದ್ಗುರು ಶ್ರೀ ದಾರುಕಾಚಾರ್ಯರ ನೂತನ ರಥೋತ್ಸವದ ಉದ್ಘಾಟನೆ ಹಾಗೂ ಲಿಂ.ಮರುಳಾರಾಧ್ಯ ಶಿವಾಚಾರ್ಯರ ೧೧೨ನೆಯ ಜಯಂತ್ಸುತ್ಸವ ನಿಮಿತ್ಯ ಹಮ್ಮಿಕೊಂಡ ಶತಮಾನದ ಶಿವಯೋಗಿ ಮರುಳಾರಾಧ್ಯ ಶಿವಾಚಾರ್ಯರ ಮಹಾಪುರಾಣ ಜನಜಾಗೃತಿ ಧರ್ಮಸಭೆ ಪಾವನ ಸಾನಿಧ್ಯ ವಹಿಸಿ ಆಶೀರ್ವದಿಸಿ ಮಾತನಾಡಿ ಅವರು, ಜಾತಿ, ಮತ, ಪಂಥಗಳನ್ನು ಬದಿಗೊತ್ತಿ, ಎಲ್ಲರೂ ಒಂದಾಗಿ ಜಾತ್ರೆ ರಥೋತ್ಸವ ಎಳೆಯುವುದರಿಂದ ಭಾರತೀಯ ಸಂಸ್ಕೃತಿಯಲ್ಲಿನ ಮಾನವೀಯತೆಯ ಸಂಕೇತವಾಗಿದೆ. ಇಂತಹ ಆಚರಣೆಗಳು ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಅಂತರಂಗ ಮತ್ತು ಬಹಿರಂಗಗಳು ಒಂದೇ ಆಗಿರುವುದರಿಂದ ಒಗ್ಗಟ್ಟನ್ನು ಮೂಡಿಸುತ್ತವೆ. ಹೊರಗಿನ ರಥೋತ್ಸವಕ್ಕಿಂತ ನಮ್ಮ ಮನಸ್ಸು, ಶರೀರವನ್ನು ಭಕ್ತಿಯಿಂದ ಹದಗೊಳಿಸಿ ಗುರುವಿನ ಸನ್ಮಾರ್ಗದಲ್ಲಿ ನಡೆದಾಗ ಒಳಗಿರುವ ದೇವಾತ್ಮ ಸಾಕ್ಷಿಯಾಗಿ ಕಾಣುವುದೇ ನಿಜವಾದ ತೇರು. ಮನಸ್ಸು ಮತ್ತು ಆತ್ಮದ ಪಾವಿತ್ರ‍್ಯತೆಯನ್ನು ಎತ್ತಿ ಹಿಡಿದು ಆದ್ಯಾತ್ಮಿಕಯೆಡೆಗೆ ಹೆಚ್ಚು ಭಕ್ತರು ಗಮನ ಹರಿಸಿದಾಗ ನೆಮ್ಮದಿಗೆ ಅಂತರಂಗ ಮತ್ತು ಬಹಿರಂಗ ಶುದ್ದವಾಗುತ್ತದೆ. ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಜ್ಞಾನದ ಆಧಾರದ ಮೇಲೆ ಪಂಚೆಂದ್ರಿಗಳು ನಿರ್ವಹಿಸುತ್ತವೆ ಆದ್ದರಿದ ಆಧ್ಯಾತ್ಮ ಅರಿಯಲು ಪರಿಶುದ್ಧ ಮನಸ್ಸು ಬೇಕು ಎಂದರು .
ಈ ವೇಳೆ ಯರಡೋಣಿ ಗ್ರಾಮದ ಅಮರೇಶ ಶಾಸ್ತ್ರಿಗಳು ಪ್ರವಚನ ನೀಡಿದರು.
ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿದರು. ದೇವರಹಿಪ್ಪರಗಿಯ ವೀರ ಮಾಹಾಂತ ಶಿವಾಚಾರ್ಯರಿಗೆ, ಕನ್ನೂರ ಸೋಮನಾಥ ಶಿವಾಚಾರ್ಯರಿಗೆ, ಯಂಕಂಚಿ ಹಿರೇಮಠದ ಅಭಿವನ ರುದ್ರಮುನಿ ಶಿವಾಚಾರ್ಯರಿಗೆ. ಹಾಗೂ ಭಕ್ತರಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಸಂಗೀತ ಶಿಕ್ಷಕ ರೇಣುಕ ಗವಾಯಿಗಳು ಕೆರುಟಗಿ, ಜೇವರ್ಗಿಯ ಮಹಾಂತೇಶ ಕಾಳಗಿ ಸಂಗೀತ ಸೇವೆ ಮಾಡಿದರು. ಪೂಜಾ ಹಿರೇಮಠ ನಿರೂಪಿಸಿದರು.

