ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಪ್ರಶಸ್ತಿ | ಏ.೨೫ ರಂದು ವಿಜಯಪುರದಲ್ಲಿ ಪ್ರಶಸ್ತಿ ಪ್ರದಾನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಹಿರುಯ ಪತ್ರಕರ್ತ ಹಾಗೂ ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಅವರು ’ಬಸವ ಸೇವಾ ಪ್ರಶಸ್ತಿ’ ಗೌರವಕ್ಕೆ ಭಾಜನರಾಗಿದ್ದಾರೆ.
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಈ ’ಬಸವ ಸೇವಾ ಪ್ರಶಸ್ತಿ’ ಯನ್ನು ಕೊಡಮಾಡುತ್ತಿದೆ.
“ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ನಿಮ್ಮ ಶ್ರಮ ಮತ್ತು ಬದ್ಧತೆಯನ್ನು ಗೌರವಿಸಲು ಮಾನವೀಯತೆ ಹಾಗೂ ಸಮಾನತೆಯ ಸಂದೇಶವನ್ನು ಸಾರಿದ ವಿಶ್ವಗುರು ಬಸವಣ್ಣನವರ ಹೆಸರಿನ ಪ್ರಶಸ್ತಿ ತಮಗೆ ಸಂದಿರುವುದು ನಿಮ್ಮ ಸೇವೆಗೆ ಸಂದ ಗೌರವ” ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ತಿಳಿಸಿದ್ದಾರೆ.
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಜಿಲ್ಲಾ ಘಟಕದ ವತಿಯಿಂದ, ಏಪ್ರಿಲ್ 25 ರಂದು ವಿಜಯಪುರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಏರ್ಪಡಿಸಿದ ಬಸವ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಇಂದುಶೇಖರ ಮಣೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಡಾ.ಶಶಿಕಾಂತ ಪಟ್ಟಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿನಂದನೆ
ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅವರನ್ನು ’ಉದಯರಶ್ಮಿ’ ಪತ್ರಿಕಾ ಬಳಗ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.

