ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೧೭ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಕ್ಕಮಹಾದೇವಿಯವರ ಹೆಸರಿನ ವಿಶ್ವವಿದ್ಯಾಲಯವು ಮಹಿಳಾ ಶಿಕ್ಷಣ, ಸಬಲೀಕರಣ, ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಉಜ್ವಲ ಕೇಂದ್ರವಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಮಂಗಳವಾರ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ೧೭ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಜವಾದ ಜ್ಞಾನವು ವ್ಯಕ್ತಿಯನ್ನು ಸ್ವತಂತ್ರ, ನಿರ್ಭೀತ ಮತ್ತು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂಬ ಸಂದೇಶವನ್ನು ಅಕ್ಕಮಹಾದೇವಿ ಅವರು ತಮ್ಮ ಜೀವನದ ಮೂಲಕ ನೀಡಿದರು. ಶಿಕ್ಷಣವು ಜ್ಞಾನ ಸಂಪಾದನೆಯ ಮಾರ್ಗ ಮಾತ್ರವಲ್ಲದೆ, ಆತ್ಮ ವಿಶ್ವಾಸ ಮತ್ತು ಸಾಮಾಜಿಕ ಸೇವೆಯ ಮಾರ್ಗವಾಗಿದೆ ಎಂದು ಅವರ ಆದರ್ಶಗಳು ನಮಗೆ ಸ್ಫೂರ್ತಿ ನೀಡುತ್ತವೆ ಎಂದರು.
ಶಿಕ್ಷಣದಲ್ಲಿ ಪಡೆದ ಪದವಿ ಜ್ಞಾನಕ್ಕೆ ಸಾಕ್ಷಿಯಾಗಿರುವುದರ ಜೊತೆಗೆ ಶಿಸ್ತು, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಸಂಕೇತವಾಗಿದೆ. ಈ ಯುಗವು ಅವಕಾಶಗಳು ಮತ್ತು ಸವಾಲುಗಳಿಂದ ಕೂಡಿದೆ. ಅಂತಹ ಪರಿಸ್ಥಿತಿಯಲ್ಲಿ, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಮತ್ತು ಸೂಕ್ಷ್ಮತೆಯ ಜೊತೆಗೆ ಜ್ಞಾನವನ್ನು ಕೊಂಡೊಯ್ಯಬೇಕಾಗುತ್ತದೆ. ಪ್ರಸ್ತುತ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಯುಗ. ಡಿಜಿಟಲ್ ಇಂಡಿಯಾ, ಸ್ಟಾರ್ಟಆಪ್‌ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ವೋಕಲ್ ಫಾರ್ ಲೋಕಲ್‌ನಂತಹ ಉಪಕ್ರಮಗಳ ಮೂಲಕ ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಉಪಸ್ಥಿತಿಯನ್ನು ವೇಗವಾಗಿ ಬಲಪಡಿಸುತ್ತಿದೆ. ಈ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಹಿಳೆಯರು ದೇಶೀಯ ಮತ್ತು ವೃತ್ತಿಪರ ಪ್ರಪಂಚಗಳನ್ನು ಮೀರಿ ಸಾಮಾಜಿಕ ಮತ್ತು ರಾಷ್ಟ್ರೀಯ ಸೇವೆಯ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಅವರು ಕಷ್ಟಕರವಾದ ಅಡೆತಡೆಗಳನ್ನು ನಿವಾರಿಸಿ ಹೊಸ ಅವಕಾಶಗಳ ಜಗತ್ತನ್ನು ಪ್ರವೇಶಿಸಿದ್ದಾರೆ. ಖಗೋಳಶಾಸ್ತ್ರ, ಬಾಹ್ಯಾಕಾಶ ಪ್ರಯಾಣ, ವೈದ್ಯಕೀಯ, ತಂತ್ರಜ್ಞಾನ, ಎಂಜಿನಿಯರಿಂಗ್, ವಾಣಿಜ್ಯ, ಗಣಿತ, ಮಿಲಿಟರಿ ಸೇವೆ ಮತ್ತು ಕ್ರೀಡೆಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅವರು ತಮಗಾಗಿ ವಿಶಿಷ್ಟ ಗುರುತನ್ನು ರೂಪಿಸಿಕೊಂಡಿದ್ದಾರೆ. ಈ ತಾಂತ್ರಿಕ ಯುಗದಲ್ಲಿಯೂ ಸಹ, ಮಹಿಳೆಯರು ಸಂಶೋಧನೆಯ ಮೂಲಕ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದರು.
ಈ ಘಟಿಕೋತ್ಸವದಲ್ಲಿ, ಶ್ರೀಮತಿ ಸಂಗೀತಾ, ಶ್ರೀಮತಿ ಪಾರ್ವತಿ ಸಿದ್ದಪ್ಪ ಹೊಂಗಲ್ ಮತ್ತು ಶ್ರೀಮತಿ ಆಶಾದೇವಿ ಅವರಿಗೆ ಗೌರವ ಪದವಿಗಳನ್ನು ನೀಡಲಾಗಿದೆ. ಅವರಿಗೆ ಅಭಿನಂದಿಸುತ್ತಾ, ಸಮಾಜಕ್ಕಾಗಿ ಅವರ ಕಾರ್ಯ ಮುಂದುವರೆಯಲಿ ಎಂದು ಆಶಿಸುತ್ತೇನೆಂದರು.
ಘಟಿಕೋತ್ಸವ ಭಾಷಣ ಮಾಡಿದ ಮುಂಬೈನ ಮಹಿಳಾ ವಿವಿಯ ಕುಲಪತಿ ಪ್ರೊ. ಉಜ್ವಲಾ ಚಕ್ರದೇವ್, ವ್ಯಾಖ್ಯಾನ ವಿಶ್ಪವಿದ್ಯಾಲಯಗಳು ನೀಡುವ ಪದವಿ ಪ್ರಮಾಣ ಪತ್ರಗಳಿಂದ ವಿದ್ಯಾರ್ಥಿಗಳ ಭವಿಷ್ಯ ಅರಳುವುದಿಲ್ಲ. ಪದವಿಯೊಟ್ಟಿಗೆ ಕೌಶಲ್ಯಗಳು, ಉದ್ಯೋಗಾರ್ಹತೆ ಮತ್ತು ಜೀವನಪೂರ್ತಿ ಕಲಿಕೆ ಮತ್ತು ಹೊಂದಾಣಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಹೇಳಿದರು.
ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯ ಮತ್ತು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳು ಸಮಾನ ಉದ್ದೇಶ ಹೊಂದಿವೆ. ಶಿಕ್ಷಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಹಾಗೂ ಅವರನ್ನು ನಾಯಕಿಯರಾಗಿ ಮತ್ತು ಬದಲಾವಣೆಯ ಸಾರಥಿಗಳಾಗಿ ರೂಪಿಸುವುದು ಈ ಎರಡೂ ವಿಶ್ವವಿದ್ಯಾನಿಲಯಗಳ ಪ್ರಮುಖ ಉದ್ದೇಶವಾಗಿದೆ ಎಂದರು.
ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ವಿಜಯಾ ಕೋರಿಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶ್ರೀಮತಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಡಾ.ಸಂಗೀತಾ ಎನ್ ಕಟ್ಟಿಮನಿ ಮತ್ತು ಶ್ರೀಮತಿ ಆಶಾದೇವಿ ಜಗದೀಶ ಗುಡಗುಂಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು ಉಪಸ್ಥಿತರಿದ್ದರು.

ಮೂವರು ಸಾಧಕಿಯರಿಗೆ ಗೌರವ ಡಾಕ್ಟರೇಟ್ ಪ್ರದಾನ
ವಿಜಯಪುರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೧೭ನೆಯ ಘಟಿಕೋತ್ಸವದಲ್ಲಿ ಪಾರ್ವತೆವ್ವ ಹೊಂಗಲ್, ಡಾ.ಸಂಗೀತಾ ಕಟ್ಟಿಮನಿ ಹಾಗೂ ಆಶಾದೇವಿ ಗುಡಗುಂಟಿ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್, ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ಓದುತ್ತಿರುವಾಗಲೇ ಗಳಿಕೆ
“ಮುಂಬರುವ ದಿನಗಳಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ’ಓದುತ್ತಿರುವಾಗಲೇ ಗಳಿಕೆ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಿಗೆ ಬಯೋಡೀಸೆಲ್ ಘಟಕ, ಕಾಗದ ಮರುಬಳಕೆ ಘಟಕ, ಅನನ್ಯ ಆಹಾರ ಸಂಸ್ಕರಣಾ ಕೇಂದ್ರ ಮತ್ತು ಗ್ರೀನ್‌ಹೌಸ್‌ಗಳಲ್ಲಿ ವಿವಿಧ ಕೌಶಲಗಳನ್ನು ಕಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.”
– ಪ್ರೊ.ವಿಜಯಾ ಕೋರಿಶೆಟ್ಟಿ
ಕುಲಪತಿ, ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರ

