ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೋಮವಾರದಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಪ್ರಯುಕ್ತ ಜಿಲ್ಲೆಯಾದ್ಯಂತ ಮಾಂಸ ಮತ್ತು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಉಮೇಶ ಕೋಳಕೂರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದೇ ದಿ. 20 ರಂದು ವಿಶ್ವಗುರು ಬಸವಣ್ಣನವರ ಜನ್ಮದಿನವಾದ ‘ಬಸವ ಜಯಂತಿ’ ಹಾಗೂ ಅತ್ಯಂತ ಪವಿತ್ರವಾದ ‘ಅಕ್ಷಯ ತೃತೀಯ’ ಹಬ್ಬಗಳು ಒಟ್ಟಾಗಿ ಆಚರಿಸಲ್ಪಡುತ್ತಿವೆ. ಈ ದಿನಗಳು ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನಗಳಾಗಿವೆ.
ವಿಶ್ವಗುರು ಬಸವಣ್ಣನವರು ದಯವೇ ಧರ್ಮದ ಮೂಲವಯ್ಯಾ…ಎಂದು ಸಾರಿದವರು. ಅಹಿಂಸೆ ಮತ್ತು ಜೀವಕಾರುಣ್ಯ ಅವರ ತತ್ವಗಳ ಮೂಲಾಧಾರ. ಅಂತಹ ಮಹಾಪುರುಷರ ಜಯಂತಿಯ ದಿನದಂದು ಜಿಲ್ಲೆಯಾದ್ಯಂತ ಮಾಂಸದ ಅಂಗಡಿಗಳು ತೆರೆದಿರುವುದು ಮತ್ತು ಪ್ರಾಣಿ ವಧೆ ಮಾಡುವುದು ಅವರ ತತ್ವಗಳಿಗೆ ಹಾಗೂ ಭಕ್ತರ ಭಾವನೆಗಳಿಗೆ ತೀವ್ರ ಧಕ್ಕೆ ತರುತ್ತದೆ. ಅದೇ ರೀತಿ, ಅಕ್ಷಯ ತೃತೀಯದಂತಹ ಮಂಗಳಕರ ದಿನದಂದು ಮದ್ಯದಂತಹ ವಸ್ತುಗಳ ಮಾರಾಟವು ಹಬ್ಬದ ಪಾವಿತ್ರತೆಯನ್ನು ಕೆಡಿಸುತ್ತದೆ ಎಂದು ಕೋಳಕೂರ ಹೇಳಿದ್ದಾರೆ.
ದಿ. 20 ರಂದು ವಿಜಯಪುರ ಜಿಲ್ಲೆಯಾದ್ಯಂತ ಲಕ್ಷಾಂತರ ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಅನ್ನದಾಸೋಹ ಹಾಗೂ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುವ ಸಲುವಾಗಿ ಈ ಕಠಿಣ ಕ್ರಮ ಅನಿವಾರ್ಯವಾಗಿದ್ದು, ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬಸವ ಜಯಂತಿಯಂದು ವಿಜಯಪುರ ಜಿಲ್ಲೆಯಾದ್ಯಂತ ಮಾಂಸ ಮಾರಾಟ (ಕಸಾಯಿಖಾನೆ ಸೇರಿದಂತೆ) ಹಾಗೂ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಈ ಕೂಡಲೇ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಈ ಮೂಲಕ ಕೋರಿದ್ದಾರೆ.

