ವಿಜಯಪುರ ಜಿಲ್ಲಾಡಳಿತದಿಂದ ವಿಜೃಂಭಣೆಯ ಅಂಬೇಡ್ಕರ ಜಯಂತ್ಯುತ್ಸವ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬುದ್ದ ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಹಾಪುರುಷರು ಮೂಢನಂಬಿಕೆಯಂತಹ ಅನಿಷ್ಠ ಪದ್ಧತಿಗಳ ವಿರುದ್ಧ ತಮ್ಮ ಚಿಂತನೆಗಳನ್ನು ಅರುಹಿದವರು. ಘನತೆಯಿಂದ ಬದುಕುವ ಚಿಂತನೆಗಳನ್ನು ಜಗತ್ತಿಗೆ ಸಾರಿದ್ದಾರೆ. ಹಾಗಾಗಿ ಮಹಾನ್ ಪುರುಷರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದರು. ಸಮಾನತೆ,ಸ್ವಾತಂತ್ರ‍್ಯ, ಅಭಿವ್ಯಕ್ತಿ, ಗೌರವಯುತ ಹಾಗೂ ಘನತೆ ಜೀವನ ನಡೆಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಹಾಗಾಗಿ ಸಂವಿಧಾನದ ಆಶಯದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಸುಂದರ ಹಾಗೂ ಭವ್ಯ ಭಾರತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬುದ್ದ, ಬಸವ, ಅಂಬೇಡ್ಕರ್ ಅವರ ಮಾನವೀಯತೆ ಸೇವಾ ಮನೋಭಾವ ಹಾಗೂ ಜಾತ್ಯತೀತ ಭವ್ಯ ಭಾರತ ನಿರ್ಮಾಣಕ್ಕೆ ಅವರ ಚಿಂತನೆಗಳು ಪೂರಕವಾಗಿದ್ದು, ಅವರೆಲ್ಲರ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳುವ ಮೂಲಕ ಭದ್ರ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು. ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೆ ಕೊಡುಗೆ ನೀಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಭದ್ರ ಬುನಾದಿ ಹಾಕಿದ್ದಾರೆ. ತನ್ಮೂಲಕ ಅವರು ವಿಶ್ವ ಶ್ರೇಷ್ಠ ಸಂವಿಧಾನ ನೀಡಿದ್ದಾರೆ ಎಂದರು.
ಬಸವಾದಿ ಶರಣರು ಜಾತಿ ರಹಿತವಾದ ಕಾಯಕ ತತ್ವವನ್ನು ಸಾರಿದವರು. ಬಸವಾದಿ ಶರಣರ ಚಿಂತನೆಗಳಾದ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ತಳಹದಿ ಸಂವಿಧಾನದಲ್ಲಿ ಅಡಕವಾಗಿದೆ. ನಾನು ಜಲಸಂಪನ್ಮೂಲ ಸಚಿವನಾಗಿ ಬರದ ಜಿಲ್ಲೆಯ ಕುಖ್ಯಾತಿ ಅಳಿಸಿ ಹಾಕಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಇದಕ್ಕೆಲ್ಲ ಡಾ.ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದ ಅವರು, ಸಂವಿಧಾನ ಅವಕಾಶ ಕಲ್ಪಿಸಿದ್ದರಿಂದ ಇದು ಸಾಧ್ಯವಾಯಿತು ಎಂದು ಮಾರ್ಮಿಕವಾಗಿ ಹೇಳಿದರು.
ಡಾ.ಎಚ್.ಎಸ್ ಅನುಪಮಾ, ಡಾ.ಜಗದೇವಿ ಗಾಯಕವಾಡ ಮತ್ತು ಡಾ.ವಿಠ್ಠಲ ವಗ್ಯಾನವರ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಗಂಗಾಧರ ಸಂಬಣ್ಣಿ, ಮಾಜಿ ಶಾಸಕರಾದ ರಾಜು ಆಲಗೂರ, ಪರಿಶಿಷ್ಟ ಜಾತಿ ಆಯೋಗದ ಸದಸ್ಯರಾದ ಸುನೀಲ ಉಕ್ಕಲಿ, ಜಿಲ್ಲಾಧಿಕಾರಿ ಡಾ. ಆನಂದ.ಕೆ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-೧ ಸಹಾಯಕ ನಿರ್ದೇಶಕ ಬಿ.ಜೆ.ಇಂಡಿ, ಮುಖಂಡರಾದ ಅಭಿಷೇಕ ಚಕ್ರವರ್ತಿ, ಅಡಿವೆಪ್ಪ ಸಾಲಗಲ್, ನಾಗರಾಜ ಲಂಬು, ಶ್ರೀನಾಥ ಪೂಜಾರಿ, ಭಿಮರಾಯ ಜಿಗಜಿಣಗಿ, ಅಶೋಕ ಚಲವಾದಿ ಸೇರಿದಂತೆ ವಿವಿಧ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಶ್ರೀಮತಿ ಸಂಗೀತಾ ಮಠಪತಿ ಅವರು ನಿರೂಪಿಸಿದರು
ವಿವಿಧ ಸ್ಪರ್ಧೆಗಳ ವಿಜೇತರಿಗೆ ಸನ್ಮಾನ
ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಭಾಷಣ, ಗಾಯನ, ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶೇ.ನೂರರಷ್ಟು ಫಲಿತಾಂಶ ಪಡೆದ ವಸತಿ ನಿಲಯದ ನಿಲಯಪಾಲಕರಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ಜಯಂತಿ ಕಾರ್ಯಕ್ರಮಕ್ಕೂ ಮೊದಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜಯಂತಿ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಭವ್ಯ ಮೆರವಣಿಗೆಗೆ ಚಾಲನೆ
ನಗರದ ಜಲನಗರದ ಬುದ್ದವಿಹಾರದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಚಾಲನೆ ನೀಡಿದರು.
ಬುದ್ಧವಿಹಾರದಿಂದ ಆರಂಭವಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಭವ್ಯ ಮೆರವಣಿಗೆಯೂ ವಿವಿಧ ಜಾನಪದ ಕಲಾತಂಡದೊಂದಿಗೆ, ನಗರದ ಬಾಗಲಕೋಟ ಕ್ರಾಸ್, ಕೆ.ಸಿ.ಮಾರ್ಕೆಟ್, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

