ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೋಡಲು ತನ್ನಂತಿಲ್ಲ ಎಂಬ ಕಾರಣಕ್ಕೆ ತಂದೆಯೋರ್ವ ಪುತ್ರನನ್ನೇ ಕೊಲೆ ಮಾಡಿದ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ.
ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಕಳೆದ ಮಾರ್ಚ್‌ನಲ್ಲಿಯೇ ಈ ಘಟನೆ ನಡೆದಿದ್ದು, ಇದೀಗ ಅಸಲಿಯತ್ತು ಬಯಲಾಗಿದೆ.
ಈ ಮೊದಲು ಮಗು ಕಾಣೆಯಾಗಿದೆ ಎಂದು ದೂರು ಕೊಟ್ಟಿದ್ದ ಕುಟುಂಬಸ್ಥರೇ ಇದೀಗ ತಂದೆಯೇ ಪುತ್ರನನ್ನು ಕೊಂದಿದ್ದಾನೆಂದು ದೂರು ದಾಖಲಿಸಿದ್ದು, ಇಡೀ ಪ್ರಕರಣ ರೋಚಕ ತಿರುವು ಪಡೆದಿದೆ.
ಘಟನೆ ವಿವರ:
ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತ ಮಾ.15 ರಂದು ತನ್ನ ಆರು ವರ್ಷದ ಪುತ್ರ ಸಿದ್ಧಾರ್ಥನನ್ನು ಶಾಲೆಗೆ ಸೇರಿಸುವುದಾಗಿ ಮನೆಯಿಂದ ಕರೆದೊಯ್ದಿದ್ದಾನೆ. ಬಳಿಕ ಮನೆಗೆ ಬಂದು ಮಗನನ್ನು ಶಾಲೆಗೆ ಸೇರಿಸಿದ್ದಾಗಿ ತಿಳಿಸಿದ್ದಾನೆ. ಏಪ್ರೀಲ್ 1 ರಂದು ಸಿದ್ಧಾರ್ಥನ ಜನ್ಮ ದಿನವಿದ್ದು, ಆಚರಣೆಗಾಗಿ ಕರೆತರಲು ಮಲ್ಲಿಕಾರ್ಜುನನ ಪತ್ನಿ ಭಾಗ್ಯಶ್ರೀ ದುಂಬಾಲು ಬಿದ್ದಿದ್ದಾಳೆ. ಕಡೇ ಪಕ್ಷ ಫೋನ್ ಮಾಡಿಯಾದರೂ ಮಗನೊಂದಿಗೆ ಮಾತನಾಡಿಸು ಎಂದು ಒತ್ತಾಯಿಸಲಾಗಿ ಯಾರ ಜೊತೆಗೋ ಮಾತನಾಡಿಸಿದ್ದು, ಮಗನ ಕೈಗೆ ಮೊಬೈಲ್ ಕೊಡುವಂತೆ ಹೇಳಿದಾಗ, ಆತ ಮಾತನಾಡಲು ನಿರಾಕರಿಸುತ್ತಿರುವುದಾಗಿ ಅಪರಿಚಿತರು ತಿಳಿಸಿದ್ದಾರೆ.
ಇದರಿಂದ ಅನುಮಾನಗೊಂಡ ಭಾಗ್ಯಶ್ರೀ ಮಗನನ್ನು ಕರೆದುಕೊಂಡು ಬರೋಣವೆಂದು ಒತ್ತಾಯಿಸಲಾಗಿ ಮಲ್ಲಿಕಾರ್ಜುನ ಬೈಕ್ ಮೇಲೆ ಕರೆದೊಯ್ದು ಸಿಂದಗಿ ಬಸ್ ನಿಲ್ದಾಣ ಮತ್ತಿತರ ಕಡೆ ಸುತ್ತಾಡಿಸಿಕೊಂಡು ಹತ್ತಿರದ ಬಂದಾಳ ಗ್ರಾಮದಲ್ಲಿ ಸಂಬಂಧಿಕರನ್ನು ಭೇಟಿ ಮಾಡಿಸಿದ್ದಾನೆ. ವಾಪಸ್ ನಾಗಠಾಣಕ್ಕೆ ಬರುತ್ತಿರಬೇಕಾದರೆ ಮಾರ್ಗಮಧ್ಯೆ ಭಾಗ್ಯಶ್ರೀ ಹಠ ಹಿಡಿಯಲಾಗಿ, ಬೋರಾಡಿ ಅತ್ತ ಮಲ್ಲಿಕಾರ್ಜುನ ಸತ್ಯ ಬಯಲುಗೊಳಿಸಿದೇ ಕೇವಲ ನನ್ನನ್ನು ಕ್ಷಮಿಸು ಎಂದು ಹೇಳಿದ್ದಾನೆ. ಬಳಿಕ ಗ್ರಾಮದಲ್ಲಿ ಕುಟುಂಬಸ್ಥರು ಹಾಗೂ ಹಿರಿಯರು ಸತ್ಯ ಬಾಯಿ ಬಿಡುವಂತೆ ಒತ್ತಾಯಿಸತೊಡಗಿದ್ದಾಗ ಮಲ್ಲಿಕಾರ್ಜುನ ಪರಾರಿಯಾಗಿದ್ದಾನೆ. ನಂತರ ಪೊಲೀಸರು ಕರೆತಂದು ವಿಚಾರಣೆ ನಡೆಸಲಾಗಿ ಸತ್ಯ ಬಯಲಾಗಿದೆ.
ಮಹಾರಾಷ್ಟ್ರದ ಕರಾಡದಲ್ಲಿ ಕೊಲೆ!
ಮಾ.16 ರಂದು ಮಹಾರಾಷ್ಟ್ರದ ಕರಾಡ ಬಳಿಯ ಕೃಷ್ಣಾ ನದಿಯಲ್ಲಿ ಪುತ್ರನನ್ನು ಕೊಂದು ಎಸೆದಿರುವ ಮಲ್ಲಿಕಾರ್ಜುನ ಬಳಿಕ ಸತ್ಯ ಮರೆಮಾಚಲು ಹಲವು ಕಸರತ್ತು ನಡೆಸಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಕರಾಡದಲ್ಲಿ ಬಾಲಕನೋರ್ವನ ಶವ ಪತ್ತೆಯಾಗಿದ್ದು, ಆತ ಶವ ಪರಿಶೀಲಿಸಲಾಗಿ ಸಿದ್ಧಾರ್ಥನದ್ದೇ ಎಂದು ಗೊತ್ತಾಗಿದೆ. ಮಲ್ಲಿಕಾರ್ಜುನನಿಗೆ ಬಾಯ್ಬಿಡಿಸಲಾಗಿ ಮಗ ನೋಡಲು ತನ್ನಂತಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆಂಬ ಅಂಶ ಬೆಚ್ಚಿಬೀಳಿಸಿದೆ.
ಸದ್ಯ ತನಿಖೆ ಪ್ರಗತಿಯಲ್ಲಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

