ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಡಾ.ಅಂಬೇಡ್ಕರ್ ಜಯಂತಿಯಲ್ಲಿ ಡಾ.ಅನೀಲ ನಾಯಕ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಾ.ಅಂಬೇಡ್ಕರ್ ಅವರು ಶ್ರೇಷ್ಠ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕೀಯ ಚಿಂತಕ ವಿಶ್ವ ಮಾನವತೆಯ ಹರಿಕಾರರಾಗಿ ಸಾಮಾಜಿಕ ನ್ಯಾಯದ ಪರ ಹಾಗೂ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ ಧೀಮಂತ ನಾಯಕ ಎಂದು ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅನೀಲ ಬಿ ನಾಯಕ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಯುನಿಟ್-1 ಮತ್ತು ಯುನಿಟ್-II, ವೈಆರ್‌ಸಿ ಹಾಗೂ ಎಸ್ಸಿ ಎಸ್ಟಿ ಸೆಲ್ ಸಹಯೋಗದಲ್ಲಿ ಡಾ. ಬಿ ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮನೆ ಮನೆಗೆ, ಮನ ಮನಕೆ ಬಾಬಾಸಾಹೇಬರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏಪ್ರಿಲ್ ೧೪ ರಿಂದ ೧೮ ರ ವರೆಗೆ ಮನೆ ಮನೆ ಮನೆಗೆ, ಮನ ಮನಕೆ ಬಾಬಾಸಾಹೇಬರು ಎಂಬ ವಿಶೇಷ ಕಾರ್ಯಕ್ರಮ ಅರ್ಥ ಪೂರ್ಣವಾಗಿ ಆಚರಿಸುವ ಉದ್ದೇಶದಿಂದ ೪ ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು ಎಂದರು.
ಬಾಬಾಸಾಹೇಬರು ಭಾರತದ ಸಂವಿಧಾನದ ಕರಡು ಸಮಿತಿ ಸದಸ್ಯರಾಗಿ ಆಧುನಿಕ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಸಾಮಾಜಿಕ ತಾರತಮ್ಯ ಹೋಗಲಾಡಿಸಲು ಸಮಾನತೆ, ಶಿಕ್ಷಣ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದರು. ಯಾವುದೇ ಫಲಾಪೇಕ್ಷೆ ಇಲ್ಲದೇ ಶೋಷಿತರ ಉದ್ಧಾರಕ್ಕಾಗಿ ದೇಶ ಭವಿಷ್ಯಕ್ಕಾಗಿ ಭಾರತದ ಸಂವಿಧಾನ ಎಂಬ ಜಗತ್ತಿನ ಶ್ರೇಷ್ಠ ಗ್ರಂಥವನ್ನು ನೀಡಿದ್ದಾರೆ. ಅವರ ತತ್ವ-ಆದರ್ಶಗಳನ್ನು ನಾವೆಲ್ಲ ಮೈಗುಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ತರನ್ನುಮ್ ಜಬೀನ್ ಖಾನ್ ಮಾತನಾಡಿ, ಅಂಬೇಡ್ಕರ್ ಭಾರತದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದರು ಎಂದರು.
ಭವ್ಯವಾದ ಜಗತ್ತಿನ ಸರ್ವ ಶ್ರೇಷ್ಠ ಸಂವಿಧಾನವನ್ನು ಭಾರಕ್ಕೆ ನೀಡುವ ಮೂಲಕ ಭಾರತೀಯ ಸಂವಿಧಾನದ ಶಿಲ್ಪಿ ಎಂದು ಕರೆಯಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದಲಾಯಿತು. ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತಾಗಿ ಪ್ರಬಂಧ ಸ್ಪರ್ಧೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಪಿ.ಎಸ್.ಪಾಟೀಲ್, ಪಿಯುಸಿ ಪ್ರಾಚಾರ್ಯ ಪ್ರೊ. ಸಿ ಬಿ ಪಾಟೀಲ್ ನ್ಯಾಕ್ ಸಂಯೋಜಕ ಡಾ.ಮಹೇಶಕುಮಾರ ಕೆ, ಎಸ್ಸಿ, ಎಸ್ಟಿ ಸೆಲ್ ಅಧ್ಯಕ್ಷ ಡಾ.ಪ್ರದೀಪ ಚವ್ಹಾಣ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಮಿಲನ ರಾಠೋಡ, ವೈಆರ್‌ಸಿ ಅಧ್ಯಕ್ಷ ಡಾ.ಅನೀಲ ಪಾಟೀಲ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್‌ಎಸ್‌ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

