ಜನಮನ ಗೆದ್ದ ಹಾಲೋಕುಳಿ | ಯುವಕರಿಂದ ಶಿಳ್ಳೆ, ಕೇಕೆಗಳ ಸುರಿಮಳೆ | ಸಾವಿರಾರು ಜನರಿಂದ ವೀಕ್ಷಣೆ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಅಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಕೆಲವರು 52 ಅಡಿ ಎತ್ತರ ಕಂಬವನ್ನು ಎರಲು ಸಿದ್ಧರಾಗಿ ನಿಂತಿದ್ದರು. ಮೈನವಿರೇಳಿಸುವ ಈ ಸಾಹಸದಲ್ಲಿ ಕೆಲವರು ಕಂಬ ಏರಲು ಹೋಗಿ ಬೀಳುತ್ತಿದ್ದರೆ, ಮತ್ತೆ ಕೆಲವರು ಎದ್ದು ಗುರಿ ಮುಟ್ಟಲು ಹರಸಾಹಸ ನಡೆಸುತ್ತಿದ್ದರು. ಕೊನೆಗೆ ಒಬ್ಬ ಗುರಿತಲುಪುತಿದ್ದಂತೆ ಚಪ್ಪಾಳೆˌ ಸಿಳ್ಳೆˌ ಕೇಕೆಗಳ ಸುರಿಮಳೆಯಾಯಿತು.
ಇದು ಗ್ರಾಮ ಆರಾಧ್ಯ ದೈವ ಮಾರುತೇಶ್ವರ ಜಾತ್ರೆ ನಿಮಿತ್ತ ಸೋಮವಾರ ನಡೆದ ಹಾಲೋಕುಳಿಯ ಝಲಕ್, ಜಾತ್ರೆ ನಿಮಿತ್ತ ಮೂರು ದಿನ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಹಾಲೋಕುಳಿ ವಿಶೇಷವಾಗಿ ಗಮನ ಸೆಳೆಯಿತು.
ಏನಿದು ವಿಶೇಷ: ದೇವಸ್ಥಾನ ಎದುರು 52 ಅಡಿ ಎತ್ತರದ ಕಂಬವನ್ನು ನೆಟ್ಟು ಅದರ ಮೇಲೆ ವ್ಯಕ್ತಿಯನ್ನು ಕೂಡಿಸಲಾಗಿತ್ತು. ಈ ಕಂಬಕ್ಕೆ ಜಾರುವ ಪದಾರ್ಥ ಲೇಪಿಸಲಾಗಿತ್ತು. ಸ್ಪರ್ಧೆಗೆ ಬಂದ ಯುವಕರು ಈ ಕಂಬ ಹತ್ತಿ ಮೇಲೆ ಕುಳಿತ ವ್ಯಕ್ತಿಯನ್ನು ಕೆಳಗೆ ಇಳಿಸಬೇಕು.
ಒಬ್ಬೊಬ್ಬರಾಗಿ ಮೇಲೆ ಏರಲು ಯತ್ನಿಸುತ್ತಿದ್ದಂತೆ ಸುತ್ತ ನೆರೆದವರು ನೀರು ಎರಚಿ ಅವರನ್ನು ಕೆಳಗಿಳಿಸಲು ಯತ್ನಿಸುತ್ತಿದ್ದರು. ಜಾರುತ್ತಿದ್ದ ಕಂಬದಿಂದ ಬಿದ್ದವರೇ ಹೆಚ್ಚು. ಕೊನೆಗೊಬ್ಬ ಎಲ್ಲ ಅಡೆತಡೆಗಳನ್ನು ಮೆಟ್ಟಿ ಮೇಲೆ ಹತ್ತಿದ. ಮೇಲೆ ಕುಳಿತ ವ್ಯಕ್ತಿಯನ್ನು ಕರೆದುಕೊಂಡು ಬಂದು ಕೆಳಗಿದ್ದ ಕೆಸರನ್ನು ಅವನಿಗೆ ಮೆತ್ತಿದ. ಆಗ ಚಪ್ಪಾಳೆಗಳ ಸುರಿಮಳೆಯೊಂದಿಗೆ ಹಾಲೋಕುಳಿಗೆ ಅದ್ದೂರಿ ತೆರೆ ಎಳೆಯಲಾಯಿತು.
ಯುವಕ ಈಶ್ವರ ಸದಾಶಿವ ಕಲ್ಯಾಣಿ ಈ ಸಾಹಸ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರನಾದನು.
ವಿಶೇಷ ಅಭಿಷೇಕ, ಮೆರವಣಿಗೆ
ಹಾಲೋಕುಳಿ ಮುನ್ನಾದಿನ ಭಾನುವಾರ ನೀರೋಕುಳಿ ಆಚರಣೆ ನಡೆಯಿತು. ಅದರ ಜತೆಗೆ ಶನಿವಾರ ಕೃಷ್ಣಾ ನದಿ ದಡದಲ್ಲಿ ಮಾರುತೇಶ್ವರನಿಗೆ ಅಭಿಷೇಕ, ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ಕೊಲ್ಲೂರು ಮುಕಾಂಬಿಕಾ ನೄತ್ಯ ಗಾತೆˌ ರಸಮಂಜರಿ ಕಾರ್ಯಕ್ರಮಗಳುˌ ವಿಶೇಷ ಪೂಜೆ ನೆರವೇರಿದವು. ರವಿವಾರ ವಿವಿಧ ಕಾರ್ಯಕ್ರಳ ಜೋತೆ ಜೆವರ್ಗಿ ರಾಜಣ್ಣ ಅವರ ತಂಡದವರಿಂದ ಮುತ್ತಿನಂತ ಅತ್ತಿಗೆ ಎಂಬ ಸುಂದರ ಸಾಮಾಜಿಕ ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಜಂಗಿ ಕುಸ್ತಿಗೆ ಮನಸೋತ ಪ್ರೇಕ್ಷಕರು
ಸೋಮವಾರ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ನಡೆದ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ ಗಮನ ಸೆಳೆಯಿತು. ಕುಸ್ತಿ ಪಂದ್ಯಾವಳಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ, ಪುಣೆ, ಸಾಂಗಲಿ, ಜತ್ತ, ರಾಜ್ಯದ ಧಾರವಾಡ, ವಿಜಯಪುರ, ಕುಂಬಾರಹಳ್ಳ, ಆಲಗೂರ, ಚಿಕ್ಕಪಡಸಲಗಿ ಸೇರಿದಂತೆ ವಿವಿಧ ಭಾಗಗಳಿಂದ ಕುಸ್ತಿ ಪಟುಗಳು ಆಗಮಿಸಿದ್ದರು. ಸೆಡ್ಡು ಹೊಡೆಯುತ್ತಲೇ ಕುಸ್ತಿ ಮೈದಾನಕ್ಕೆ ಅವರು ಇಳಿಯುತ್ತಿದ್ದಂತೆ ಸಾವಿರಾರು ಜನರ ಸಂಭ್ರಮ ಇಮ್ಮಡಿಗೊಂಡಿತು. ಮೈದಾನದಲ್ಲಿ ಕುಸ್ತಿ ಪಟುಗಳ ಸೆಣಸಾಟ ಕ್ಷಣ ಕ್ಷಣಕ್ಕೂ ರೋಮಾಂಚನಗೊಳಿಸಿ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು. ಜೈ ಹನುಮಾನ ಯುವ ಮಿತ್ರ ಮಂಡಳಿಯವರು ನೇತೃತ್ವ ವಹಿಸಿದ್ದರು.
“ನಮ್ಮೂರಿನ ಮಾರುತೇಶ್ವರ ಭಕ್ತರ ಇಷ್ಟಾರ್ಥ ಪೂರೈಸುವ ಭಾಗ್ಯವಂತನಾಗಿದ್ದಾನೆ. ಹನುಮದೇವರಿಗೆ ಹರಕೆ ಹೊತ್ತರೆ ಎಲ್ಲವು ಈಡೇರಿಸುತ್ತಾನೆ. ಆದ್ದರಿಂದ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.”
– ಪರಮಗೊಂಡ ಬಾ ದಾನಗೌಡ
ಜೈ ಹನುಮಾನ ಕಮೀಟಿಯ ಅಧ್ಯಕ್ಷರು, ಗ್ರಾಮದ ಹಿರಿಯರು
” ಕುಸ್ತಿ ಕ್ರೀಡೆಯು ಒಲಿಂಪಿಕ್ ನಲ್ಲಿ ಪದಕದ ಭರವಸೆಯ ಕ್ರೀಡೆಯಾಗಿದೆ. ಭಾರತೀಯ ಕ್ರೀಡೆಗಳಲ್ಲಿ ಸಂಸ್ಕಾರವನ್ನು ಕಲಿಸುವ, ರಾಜ ಮಹಾರಾಜರು ಬೆಳೆಸಿರುವಂತಹ ಈ ಕ್ರೀಡೆಯನ್ನು ಪಾಲನೆ, ಪೋಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.”
– ಮಲ್ಲು ಪಟ್ಟಣಶೆಟ್ಟಿ
ನಿವೃತ್ತ ಶಿಕ್ಷಕರು ಹಾಗೂ ಕುಸ್ತಿ ಕಾರ್ಯಕ್ರಮ ನಿರೂಪಕರು

