ಸದುಪಯೋಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಫೆಬ್ರವರಿ ೨ರಂದು ಕೌಶಲ್ಯದಿಂದ ಉದ್ಯೋಗದ ಕಡೆಗೆ ಯುವ ಸಮೃದ್ಧಿ ಸಮ್ಮೇಳನದ ಬೃಹತ್ ಉದ್ಯೋಗ ಮೇಳವು ಅಂದು ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೫ರವರೆಗೆ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಮೇಳದಲ್ಲಿ ಉತ್ತರ ಕರ್ನಾಟಕ ಭಾಗದ ಯುವನಿಧಿ ಫಲಾನುಭವಿಗಳು ಹಾಗೂ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ, ಪದವಿ, ಸ್ನಾತ್ತಕೊತ್ತರ ಪದವಿ ಹಾಗೂ ಇಂಜಿನೀಯರಿಂಗ್ ಪದವಿಯಲ್ಲಿ ಉತ್ತೀರ್ಣರಾದವರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು, ಉದ್ಯೋಗಮೇಳದಲ್ಲಿ ಭಾಗವಹಿಸಿ, ತಮ್ಮ ಆಸಕ್ತಿ ಹಾಗೂ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆದುಕೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಮಾಹಿತಿ ನೀಡಿದರು.
ಅವರು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಜಿಲ್ಲಾ ಕ್ರೀಡಾಂಗಣದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ೧೫೦ಕ್ಕೂ ಅಧಿಕ ಉದ್ಯೋಗದಾತ ಕಂಪನಿ ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ ೧೪೩ ಉದ್ಯೋಗದಾತ ಕಂಪನಿಗಳು ನೋಂದಣಿಯಾಗಿವೆ.
ಈಗಾಗಲೇ ರಾಜ್ಯ, ವಿಭಾಗ ಮತ್ತು ಜಿಲ್ಲಾ ಮಟ್ಟಗಳಲ್ಲಿ ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಿ, ನಿರುದ್ಯೋಗಿ ಯುವ ಜನಾಂಗಕ್ಕೆ ಉದ್ಯೋಗ ಅವಕಾಶ ಒದಗಿಸಲಾಗಿದೆ. ಅದರಂತೆ ಯುವಶಕ್ತಿ ಈ ದೇಶದ ಸಂಪತ್ತು, ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ದೇಶದ ಯುವಶಕ್ತಿಯನ್ನು ಬಳಸಿಕೊಂಡು ಆರ್ಥಿಕತೆ ಬಲಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಉದ್ಯೋಗದಾತರ ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ಉದ್ಯಮಗಳಿಗೆ ಅಗತ್ಯ ಇರುವ ಕೌಶಲ್ಯ ತರಬೇತಿ ನೀಡುವುದರೊಂದಿಗೆ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ದೊರಕಿಸಿ ಸ್ವಾವಲಂಬಿ ಬದಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಕರಪತ್ರ ಬಿಡುಗಡೆ
ಉದ್ಯೋಗ ಮೇಳದ ಕರಪತ್ರ ಹಾಗೂ ಪೋಸ್ಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ. ಬಿ ಪಾಟೀಲ ಅವರು ಬಿಡುಗಡೆಗೊಳಿಸಿದರು.
ನೊಂದಣಿಗೆ ಅವಕಾಶ
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವಿಜಯಪುರದ ವತಿಯಿಂದ ಫೆ.೨ರಂದು ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳ, ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಸುವರ್ಣಾವಕಾಶವಿದ್ದು, ಹೆಸರಾಂತ ಕಂಪನಿಗಳಿಂದ ನೇರ ಸಂದರ್ಶನದ ಅವಕಾಶ ಸಿಗಲಿದೆ ಆಯ್ಕೆಯಾದವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ಸಹ ನೀಡಲಾಗುವುದು ಆಸಕ್ತ ಅಭ್ಯರ್ಥಿಗಳು ಈ https://udyogamela.ksdckarnataka. com/loginಲಿಂಕ್‌ನ್ನು ಕ್ಲಿಕ್ ಮಾಡಿ ತಮ್ಮ ವಿವರವನ್ನು ಭರ್ತಿ ಮಾಡಿ, ಓಟಿಪಿ ನಮೂದಿಸಿ ಲಾಗಿನ್ ಪ್ರೊಫೈಲ್ ಕ್ರಿಯೆಟ್ ಮಾಡಿಕೊಂಡು ನೊಂದಾಯಿಸಿಕೊಳ್ಳಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೯೭೦೧೯ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯ್ಕ, ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಕನಾನ್ ಮುಶ್ರೀಪ್,ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷರಾದ ಡಾ: ಆನಂದ ಕೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಜಿಲ್ಲಾ ಕೌಶಲ್ಯಾಭಿವೃದ್ಧಿಕಾರಿಗಳಾದ ಮಹೇಶ ಮಾಳವಾಡೇಕರ ಉಪಸ್ಥಿತರಿದ್ದರು.

