ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗಣರಾಜ್ಯೋತ್ಸವ ಆಚರಣೆ ಅಂಗವಾಗಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಜಿಲ್ಲಾಪಂಚಾಯತಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟ, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಪ್ರಜಾಸತ್ತಾತ್ಮಕ ಪರಂಪರೆಯನ್ನು ಸ್ಮರಿಸುವ ಅತ್ಯಂತ ಮಹತ್ವದ ದಿನವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ರೂಪುಗೊಂಡಿರುವ ನಮ್ಮ ಸಂವಿಧಾನವು ಸಮಾನತೆ, ಸ್ವಾತಂತ್ರ‍್ಯ ಮತ್ತು ಭ್ರಾತೃತ್ವ ತತ್ವಗಳ ಮೇಲೆ ನಿಂತಿದ್ದು, ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಮತ್ತು ಗೌರವ ಒದಗಿಸುವ ಶಾಶ್ವತ ದಾಖಲೆ ಎಂದು ಅಭಿಪ್ರಾಯಪಟ್ಟರು. ನಮ್ಮ ದೈನಂದಿನ ಕರ್ತವ್ಯ ನಿರ್ವಹಣೆಯಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಹೊಣೆಗಾರಿಕೆಯನ್ನು ಪಾಲಿಸುವುದೇ ನಿಜವಾದ ರಾಷ್ಟ್ರಭಕ್ತಿ, ಸಾರ್ವಜನಿಕ ಬದುಕಿನಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಜನರ ನಂಬಿಕೆಗೆ ಪಾತ್ರರಾಗುವಂತೆ ಪಾರದರ್ಶಕತೆ ಮತ್ತು ಸೇವಾ ಭಾವನೆಯೊಂದಿಗೆ ಕೆಲಸ ಮಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಯುವಜನರು ಸಂವಿಧಾನದ ಆಶಯಗಳನ್ನು ಅರಿತು ದೇಶದ ಅಭಿವೃದ್ಧಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡಬೇಕು. ಸಾಮಾಜಿಕ ಏಕತೆ, ಸೌಹಾರ್ದತೆ ಹಾಗೂ ಪರಸ್ಪರ ಗೌರವದಿಂದ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಮುಂದಾಗೋಣ ಎಂದು ತಿಳಿಸಿದರು. ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಸಂಕಲ್ಪವನ್ನು ಈ ಗಣರಾಜ್ಯೋತ್ಸವದಂದು ಎಲ್ಲರೂ ದೃಢಪಡಿಸಬೇಕೆಂದರು.
ಈ ಸಂದರ್ಭ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ಪ್ರಕಾಶ ವಡ್ಡರ, ಮುಖ್ಯ ಯೋಜನಾಧಿಕಾರಿಗಳಾದ ಸಿ.ಬಿ.ಕುಂಬಾರ, ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಯೋಜನಾ ನಿರ್ದೇಶಕರಾದ ಅಶೋಕ ಕಲಘಟಗಿ ಸೇರಿ ಎಲ್ಲ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

