ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಹಂ ಮೇತಿ’ ಎಂಬಂತೆ ಎಲ್ಲವು ನಾನು, ನನ್ನದು, ನನ್ನಿಂದ ಎಂಬ ಮಮಕಾರ-ಅಹಂಭಾವ ತೊಲಗಲಿ. ‘ಪರೋಪಕಾರಂ ಇದಂ ಶರೀರಂ’ ಎಂಬ ಶ್ಲೋಕದಂತೆ ಜೀವನ ಇರುವುದು ನನಗಾಗಿ ಅಷ್ಟೇ ಅಲ್ಲದೇ ಈ ಸಮಾಜದ ಅಭ್ಯುದಯಕ್ಕಾಗಿ ಮತ್ತು ಸಹಾಯ ಬೇಡಿ ಬಂದವರಿಗೆ ಸಾಧ್ಯವಾದಷ್ಟು ಉಪಕಾರ ಮಾಡುವ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಜಮಖಂಡಿಯಯ ಓಲೆಮಠದ ಶ್ರೀ ಆನಂದ ದೇವರು ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಎನ್.ಜಿ,ಓ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದ ೬ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸದ್ಭಾವನಾ ಜನಜಾಗೃತಿ(ದುಶ್ಚಟಗಳ ನಿರ್ಮೂಲನೆ) ಮತ್ತು ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು.
ಅವರು ಮಾತನಾಡುತ್ತಾ, ಇಂದಿನ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಿತಿಮೀರಿದ ಬಳಕೆಯಿಂದ ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯಗಳು ಅಧಃಪತನಗೊಳ್ಳುತ್ತಿದೆ. ಮಾನವ ಕೇವಲ ಹಣ ಗಳಿಕೆಯತ್ತ ತನ್ನ ಜೀವನವನ್ನು ಸಾಗಿಸುತ್ತಾ, ಸಂಸಾರವೆಂಬ ಪ್ರಾಪಂಚಿಕ ಜಗತ್ತಿನಲ್ಲಿ ಮುಳುಗಿ ಹೋಗಿದ್ದಾನೆ. ಮನದಲ್ಲಿರುವ ಅಷ್ಟ ಅರಿಷಡ್ವರ್ಗಗಳಾದ ಮದ. ಮೋಹ. ಮತ್ಸರ, ಲೋಭ, ಮಮಕಾರ ಮತ್ತು ಮನದಲ್ಲಿ ಕಲ್ಮಶ ಭಾವನೆಗಳನ್ನು ತೊಲಗಿಸಿ, ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆಯಬೇಕು. ಅದಕ್ಕಾಗಿ ನಾವೆಲ್ಲರೂ ಇಂದು ಸಂಸಾರವೆಂಬ ಭವಸಾಗರದಿಂದ ಹೊರಬಂದು ಬಸವಣ್ಣನವರ ವಚನದಂತೆ ”ನಡೆಯಲರಿಯದೇ, ನುಡಿಯಲರಿಯದೇ ಲಿಂಗವ ಪೂಜಿಸಿ ಫಲವೇನು? ಇತರರ ಸುಖ ಎನ್ನ ಸುಖ, ಪರರ ದುಃಖ ಎನ್ನ ದುಃಖ” ಎಂಬಂತೆ ಪರೋಪಕಾರಿಯಾಬೇಕು ಎಂಬುದನ್ನು ಅರಿತು ಸನ್ಮಾರ್ಗದ ದಾರಿ ಕಂಡುಕೊಂಡು ನಮ್ಮ ಬದುಕು ಸುಂದರ ಮತ್ತು ನೆಮ್ಮದಿಯುತವಾಗಲು ಇಂತಹ ಸತ್ಸಂಗ ಭಾಗವಹಿಸಿ ಶರಣರ ಜೀವನಾದರ್ಶಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಪ್ರವಚನಕಾರರಾದ ಜುಂಜರವಾಡದ ಬಸವರಾಜೇಂದ್ರ ಶರಣರು ಬಸವಾದಿ ಶರಣರ ಜೀವನ-ಮೌಲ್ವಿಕ ಸಂದೇಶಗಳು ಕುರಿತು ಪ್ರವಚನ ನೀಡುತ್ತಾ, ದೇವಸ್ಥಾನಗಳಲ್ಲಿ ಪ್ರವಚನ, ಕೀರ್ತನೆ, ಪುರಾಣ, ಭಜನೆ, ಧ್ಯಾನ ಮತ್ತು ಅಧ್ಯಾತ್ಮಿಕ ಗೋಷ್ಠಿಗಳನ್ನು ಆಯೋಜಿಸುವುದರ ಮೂಲಕ ಮನದಲ್ಲಿರುವ ಅರಿಷಡ್ವರ್ಗಗಳನ್ನು ತೊಲಗಿಸಿ ಮತ್ತು ಕಲ್ಮಶ ಭಾವವನ್ನು ಅಳಿಸಿ ಸದ್ಗುಣಗಳನ್ನು ಒಡಮೂಡಿಸಲು ಶ್ರಾವಣ ಮಾಸ ಪೂರಕವಾಗಿದೆ. ಮನುಷ್ಯ ಹಣ, ಆಸ್ತಿ, ಸಂಪತ್ತು ಏನೆಲ್ಲವನ್ನು ಸಂಪಾದಿಸಿದರೂ ಜೀವನದಲ್ಲಿ ಮಾನಸಿಕ ಸುಖ-ಶಾಂತಿ ಮತ್ತು ನೆಮ್ಮದಿ ಇಲ್ಲದಂತಾಗಿದೆ. ಅದಕ್ಕಾಗಿ ವರ್ಷದಲ್ಲಿ ಈ ಶ್ರಾವಣ ಮಾಸದಲ್ಲಾದರೂ ಇಂತಹ ಮೌಲ್ಯಯುತವಾದ ಸಂದೇಶ ಮತ್ತು ಬದುಕಿನ ಸಾರ್ಥಕತೆಯ ಬಗ್ಗೆ ಅರಿತುಕೊಂಡು ಬಾಳುವ ಬದುಕ ನಮ್ಮದಾಗಬೇಕು ಎಂದರು.
ಪ್ರವಚನದಲ್ಲಿ ಸಂಗೀತ ಸಾಥ ನೀಡುತ್ತಿರುವ ಆನಂದ ಬ್ಯಾಳಿ ಮತ್ತು ಹಣಮಂತ ಶಿರೋಳ ಇವರು ವೇದಿಕೆ ಮೇಲಿದ್ದರು.
ಎನ್.ಜಿ.ಓ. ಕಾಲನಿ ಕ್ರಾಸನಿಂದ ಆನಂದ ದೇವರು ಸ್ವಾಮೀಜಿಯವರನ್ನು ಮಹಿಳೆಯರು ಕುಂಭ-ಕಳಶ, ಆರತಿ ಮತ್ತು ಭಜನೆಯೊಂದಿಗೆ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಸ್ವಾಗತಿಸಲಾಯಿತು.
ಸಮಾರಂಭದಲ್ಲಿ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಲಕ್ಷ್ಮಣ ಶಿಂಧೆ, ಶಿವಪ್ಪ ಸಾವಳಗಿ, ಬಲವಂತ ಬಳೂಲಗಿಡದ, ಭೀಮರಾಯ ಬಿರಾದಾರ, ಎಸ್,ಜಿ,ನಿಂಗನಗೌಡ್ರ, ಎಂ.ಎನ್.ಉಕುಮನಾಳಮಠ, ಮಲ್ಲಿಕಾರ್ಜುನ ಪಾಟೀಲ, ರಮೇಶ ಕೋಷ್ಠಿ, ಗಂಗಾಧರ ಚಾಬೂಕಸವಾರ, ಬಾಬು ಕೋಲಕಾರ, ಬಸವರಾಜ ಕನ್ನೂರ ಇನ್ನಿತರರು ಸೇರಿದಂತೆ ನವರಸಪುರದ ವಿವಿಧ ಬಡಾವಣೆಗಳ ನೂರಾರು ಜನ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

