ಉದಯರಶ್ಮಿ ದಿನಪತ್ರಿಕೆ
ಸಿಂದಗಿ: “ದಾಸ ಸಾಹಿತ್ಯಕ್ಕಷ್ಟೇ ಅಲ್ಲ, ಕನ್ನಡ ಸಾಹಿತ್ಯ ಲೋಕದೆಲ್ಲೆಡೆ ಪುರಂದರ ದಾಸರ ಕೊಡುಗೆ ಅನನ್ಯ ಮತ್ತು ಅಪಾರ” ಎಂದು ಪಂ. ವಿಠ್ಠಲಾಚಾರ್ಯ ಹೇಳಿದರು.
ಸಿಂದಗಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಲಾಗಿದ್ದ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಅವರು ಪ್ರವಚನ ನೀಡಿದರು. “ಹರಿದಾಸರ ಪರಂಪರೆಯಲ್ಲಿ ಪುರಂದರ ದಾಸರ ಸ್ಥಾನ ಶ್ರೇಷ್ಠ. ಇತರ ದಾಸವರೇಣ್ಯರು ಅವರನ್ನೇ ಕೊಂಡಾಡಿರುವುದೇ ಇದರ ದೃಢವಾದ ಸಾಕ್ಷಿ” ಎಂದು ಹೇಳಿದರು.
ಸಾಹಿತ್ಯ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಪುರಂದರ ದಾಸರು ನೀಡಿದ ಕೊಡುಗೆ ಅನನ್ಯ. ‘ಪುರಂದರ ವಿಠ್ಠಲ’ ಎಂಬ ಅಂಕಿತನಾಮದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿ, ಸಮಾಜದಲ್ಲಿದ್ದ ಅನೇಕ ಮೌಢ್ಯಗಳನ್ನು ಹೋಗಲಾಡಿಸಿ ಜನಜಾಗೃತಿ ಮೂಡಿಸಿದರು ಎಂದು ಪಂಡಿತರು ವಿವರಿಸಿದರು. “ಅಂತಹ ಮಹಾನ್ ಹರಿದಾಸರ ಕೀರ್ತನೆಗಳನ್ನು ಅಧ್ಯಯನ ಮಾಡುವ ಮೂಲಕ ಜೀವನ ಪಾವನವಾಗುತ್ತದೆ” ಎಂದು ಅವರು ಸಲಹೆ ನೀಡಿದರು.
ಮಠದಲ್ಲಿ ಬೆಳಿಗ್ಗೆ ಪೂಜೆ, ಪಂಚಾಮೃತಾಭಿಷೇಕ, ಅಷ್ಟೋತ್ತರ ಸೇವೆ ಹಾಗೂ ಭಜನೆ ಕಾರ್ಯಕ್ರಮಗಳು ಭಕ್ತಿಭಾವಪೂರ್ಣವಾಗಿ ಜರುಗಿದವು. ಮಧ್ಯಾಹ್ನದ ಪ್ರಸಾದ ವಿತರಣೆಯನ್ನು ರವೀಂದ್ರ ಕುಲಕರ್ಣಿ ಕೊರಳ್ಳಿ ಅವರು ವ್ಯವಸ್ಥೆ ಮಾಡಿದ್ದರು.
ಕಾರ್ಯಕ್ರಮದಲ್ಲಿ ಸಿಂದಗಿ ನಗರದ ಅನೇಕ ಭಕ್ತರು ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದರು.

