ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಸ್ವಚ್ಛತೆ ಕಾಡುತ್ತಿದೆ ಇಲ್ಲಿನ ಕಲುಷಿತ ನೀರು ಹಾಗೂ ಮಲ ಮೂತ್ರ ವಿಸರ್ಜನೆ ಸಾರ್ವಜನಿಕ ಚರಂಡಿಗಳಲ್ಲಿ ಹರಿದು ಬರುತ್ತಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆಯ ಹೋಬಳಿ ಕಾರ್ಮಿಕ ಘಟಕದ ಅಧ್ಯಕ್ಷ ಗುರುರಾಜ ಎಸ್ ಅಂಗಡಿ ಆರೋಪಿಸಿದ್ದಾರೆ.
ಈ ಕುರಿತು ತಾಲೂಕು ಆರೋಗ್ಯಾಧಿಕಾರಿಗೆ ಬರೆದ ಮನವಿ ಪತ್ರವನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಮೂಲಕ ಸಲ್ಲಿಸಿದ್ದು ಆರೋಗ್ಯ ಕೇಂದ್ರವು ಸಾರ್ವಜನಿಕರ ಪಾಲಿಗೆ ಆಶಾಕಿರಣವಾಗಬೇಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯು ರೋಗಗಳನ್ನು ಹರಡುವ ಕೇಂದ್ರವಾಗಿ ಮಾರ್ಪಡುತ್ತಿರುವುದು ಅತ್ಯಂತ ವಿಷಾದನೀಯ, ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಹಲವು ಬಾರಿ ವೈದ್ಯಾಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ, ಕಲುಷಿತ ನೀರನ್ನು ಬೇಕಾಬಿಟ್ಟಿಯಾಗಿ ಸಾರ್ವಜನಿಕ ಚರಂಡಿಗೆ ಬಿಡುತ್ತಿರುವುದು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಸ್ವಚ್ಛತೆಯ ಜವಾಬ್ದಾರಿ ಹೊತ್ತ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಸಿಬ್ಬಂದಿಗಳು ಸಾರ್ವಜನಿಕರ ಹಿತದೃಷ್ಟಿಯನ್ನು ಮರೆತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ ಈ ವೇಳೆ ನಾರಾಯಣ ಸೂರ್ಯವಂಶಿ, ಬಸ್ಸು ದೊರೆ, ಕೃಷ್ಣ, ಸೋಮನಾಥ ಸೇರಿದಂತೆ ಇತರರು ಇದ್ದರು.

