ಉದಯರಶ್ಮಿ ದಿನಪತ್ರಿಕೆ
ವರದಿ: ರಾಜಶೇಖರ ಡೋಣಜಮಠ
ಚಡಚಣ: ಮಹಾರಾಷ್ಟ್ರ-ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಕೊನೆಯ ಪುಟ್ಟ ಪಟ್ಟಣ, ಸ್ವಾತಂತ್ರ್ಯ ಸಂಗ್ರಾಮಕ್ಕೆ 50ಜನ ಹೋರಾಟಗಾರರನ್ನು ಕೊಟ್ಟ ಕನ್ನಡನಾಡಿನ ಇತಿಹಾಸದ ಹೆಮ್ಮೆಯ ತಾಣ ಹಾಗೂ ಕರ್ನಾಟಕ ಮಹಾರಾಷ್ಟ್ರ ದ ಸುತ್ತಮುತ್ತಲೂ 42 ಹಳ್ಳಿಗಳು ವ್ಯಾಪಾರಕ್ಕಾಗಿ ಅವಲಂಬಿತವಾಗಿರುವ ವಿಜಯಪುರ ಜಿಲ್ಲೆಯಲ್ಲಿಯೆ ಹೆಸರು ಮಾಡಿದ ವಾಣಿಜ್ಯ ಕೇಂದ್ರ ಚಡಚಣದಲ್ಲಿ ಶ್ರೀ ಸಂಗಮೇಶ್ವರ ದೇವರ ಜಾನುವಾರ ಜಾತ್ರೆಯು ರವಿವಾರ ಜ.18 ರಿಂದ ಗುರುವಾರ ಜ.22 ರವರೆಗೆ 5 ದಿನಗಳ ಕಾಲ ಲಕ್ಷಾಂತರ ಸಂಖ್ಯೆಯ ವಿವಿಧ ತಳಿಯ ಜಾನುವಾರ ಮಾರಾಟದ ಜಾತ್ರೆ ಜರುಗಲಿದೆ.
ಅವರಾತ್ರಿ ಅಮವಾಸ್ಯೆಯದಿನ ಜ.18 ರಂದು ಬೆಳಿಗ್ಗೆ 9.00 ಗಂಟೆಗೆ ಶ್ರೀ ಸಂಗಮೇಶ್ವರ “ದೇವರ ನುಡಿ” ಯನ್ನು ವೇ.ಸಂಗಯ್ಯ ಡೋಣಜಮಠ ಅವರಿಂದ 2026ನೇ ವರ್ಷದ ಆಗು ಹೋಗುಗಳ ಕುರಿತು ಭವಿಷ್ಯದ ನುಡಿಗಳು (ಮಳೆ, ಬೆಳೆ, ರಾಜಕೀಯ ಹಾಗೂ ಇನ್ನಿತರ) ಜರುಗಿದ ನಂತರ ಜಾತ್ರೆಯು ಆರಂಭಗೊಳ್ಳುತ್ತದೆ.
ಜ.19 ಸೋಮವಾರ ರಾತ್ರಿ 9.00 ಗಂಟೆಗೆ “ಚಿತ್ರ–ವಿಚಿತ್ರ ಸುಡುಮದ್ದು” ಪ್ರದರ್ಶನ. ಜ.20 ಮಂಗಳವಾರ “ಪ್ರಸಿದ್ಧ ಮಲ್ಲರ” ಕುಸ್ತಿಗಳು ವಿಜೇತ ಪೈಲವಾನರಿಗೆ ತಕ್ಕ ಬಹುಮಾನ ನೀಡಲಾಗುವದು. ಜ.21 ಬುಧವಾರ “ಜಾನುವಾರು ಪ್ರಶಸ್ತಿ” ಪಶು ವೈದ್ಯಾಧಿಕಾರಿಗಳು ಆಯ್ಕೆ ಮಾಡಿದ ಯೋಗ್ಯ ರಾಸುಗಳಿಗೆ ಪ್ರಶಸ್ತಿ ಹಾಗೂ ಬಹುಮಾನ, ಜ.22 ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ–ನಂದೀಧ್ವಜವು ವಿವಿಧ ವಾದ್ಯಗಳೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ಮಂದಿರದವರೆಗೆ ಮೇರವಣಿಗೆ. ಪಟ್ಟಣದ ಶ್ರೀಚೌಡೇಶ್ವರಿ ಡ್ರೆಸಿಸ್ ಮಾಲಿಕ ವಿವೇಕಾನಂದ ಹಿಟ್ನಳ್ಳಿ ಅವರು ಪ್ರತಿ ವರ್ಷದಂತೆ ಜಾತ್ರೆ ಮುಗಿಯುವವರೆಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ.
ಜಾತ್ರೆಯ ಹಿನ್ನೆಲೆ
1942ರಲ್ಲಿ ನಡೆದ ಚಲೇಜಾವ ಚಳವಳಿಯಲ್ಲಿ ಸೋಲಾಪುರದಲ್ಲಿ ನಡೆಯುತ್ತಿದ್ದ ಜಾನುವಾರು ಜಾತ್ರೆಯಲ್ಲಿ ಬ್ರಿಟಿಷರು ನಡೆಸಿದ ದಬ್ಬಾಳಿಕೆಗೆ ತುತ್ತಾದ ಜನ ತಮ್ಮ ದನಕರುಗಳೊಂದಿಗೆ ಪುಷ್ಯ ಮಾಸದಲ್ಲಿ ಓಡಿ ಬಂದು ಚಡಚಣದ ಶ್ರೀ ಸಂಗಮೇಶ್ವರ ದೇವಸ್ಥಾನದ ಎರಡು ಹಳ್ಳಗಳ ವಿಶಾಲ ಮೈದಾನದಲ್ಲಿ ರೈತರು ಬೀಡು ಬಿಟ್ಟರು.
ರೈತರು ಭಯಗ್ರಸ್ಥರಾದ ಸ್ಥಿತಿಯಲ್ಲಿ ಚಡಚಣದ ಹಿರಿಯರು ರೈತರಿಗೆ ಆಹಾರದ ವ್ಯವಸ್ಥೆ ಜಾನುವಾರಗಳಿಗೆ ತಿನ್ನಲಿಕ್ಕೆ ಮೇವೂ, ನೀರಿನ ವ್ಯವಸ್ಥೆ ಹಾಗೂ ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಮಾಡಿದಾಗ ರೈತರ ಮುಖದಲ್ಲಿ ಎಲ್ಲಿಲ್ಲದ ಸಂತಸ, ಸಮಾಧಾನ ಹಾಗೂ ನೆಮ್ಮದಿ ಕಂಗೊಳಿಸಿತು. ಅಂದಿನಿಂದ ಹಿರಿಯರು ದನಗಳ ಜಾತ್ರೆ ನಡೆಸಲು ತೀರ್ಮಾನಿಸಿ, 1946ರಿಂದ ಈ ಜಾತ್ರೆ ಆರಂಭಿಸಿದರು ಎನ್ನಲಾಗಿದೆ.
ಈ ವರ್ಷ ಶ್ರೀ ಸಂಗಮೇಶ್ವರ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ(ಎ.ಪಿ.ಎಮ್.ಸಿ) ಹಾಗೂ ಪಟ್ಟಣ ಪಂಚಾಯತ ಚಡಚಣ ಇವರ ಸಹಯೋಗದಲ್ಲಿ ಜಾತ್ರೆ ನಡೆಯಲಿದೆ.ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದು , ಸಾವಿರಾರು ದನಕರುಗಳ ಖರೀದಿಯು ನಡೆಯುತ್ತದೆ. ಜಾನುವಾರುಗಳ ಜಾತ್ರೆ ಅಂಗವಾಗಿ ಜಾತ್ರಾರ್ಥಿಗಳಿಗೆ ಮತ್ತು ಜಾನುವಾರುಗಳಿಗೆ ಆರೋಗ್ಯ ರಕ್ಷಣೆಯ ವ್ಯವಸ್ಥೆ, ನೀರು ಮತ್ತು ಬೆಳಕಿನ ಸೌಲಭ್ಯ, ಕಾನೂನು ಹಾಗೂ ರಕ್ಷಣೆಯ ವ್ಯವಸ್ಥೆ, ವಿವಿಧ ವಸ್ತು ಹಾಗೂ ಉತ್ತಮ ಬೆಳೆಗಳ ಪ್ರದರ್ಶನದ ವ್ಯವಸ್ಥೆ,
ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ,ಕೇರಳ,ಆಂದ್ರ ಪ್ರದೇಶ,ಗುಜರಾತ ರಾಜ್ಯಗಳ ಖಿಲಾರಿ ತಳಿ ಸೇರಿದಂತೆ ವಿವಿಧ ತಳಿಯ ಲಕ್ಷಾಂತರ ರಾಸುಗಳು ಆಗಮಿಸಿ, ಭಾರಿ ಪ್ರಮಾಣದಲ್ಲಿ ವ್ಯಾಪಾರ ವೈವಾಟು ಮಾಡಿಕೊಳ್ಳುತ್ತಾರೆ.

ಚಡಚಣ ಪಟ್ಟಣದ ಹಿನ್ನೆಲೆ
ವಿಜಯಪುರ-ಸೋಲಾಪುರ-ಪಂಢರಪುರಗಳ ತ್ರಿಕೋನ ಮಿತಿಗೆ(60 ಕಿ.ಮೀ ಅಂತರದಲ್ಲಿರುವ ಚಡಚಣ ಪಟ್ಟಣ) ಮಧ್ಯವರ್ತಿಯಾಗಿ ರಾಜ್ಯ ಹೆದ್ದಾರಿ 51 ಕ್ಕೆ ಹೊಂದಿಕೊಂಡಿರುವ ಚಡಚಣ ಪಟ್ಟಣದಲ್ಲಿ ಕ್ರಿ.ಶ. 1067ರ ಬಿಜ್ಜರಸನ ಮಗನಾದ ಕನ್ನಮ್ಮರಸನು ಚಡಚಣ ಶಾಸನವೊಂದರಲ್ಲಿ ಆತನು ಗಡಿ ಭಾಗದ ಮಹಾರಾಷ್ಟ್ರ ರಾಜ್ಯದ ಸೊಲಾಪುರ ಜಿಲ್ಲೆಯ ಮಂಗಳವೇಡ ಪಟ್ಟಣದಿಂದ ರಾಜ್ಯಭಾರ ಮಾಡುತ್ತಿದ್ದನೆಂದು ಹೇಳಲಾಗುತ್ತಿದೆ. ಶಾಸನದಲ್ಲಿ ಷಟ್ಪದಿ ಛಂದಸ್ಸಿನಲ್ಲಿ ರಚಿತವಾದ ಪದ್ಯದಿಂದ ಚಡಚಣ ಹಾಗೂ ಅದರ ಪ್ರಭುಗಳ ವಿಷಯ ತಿಳಿದು ಬರುವುದು. ಸುಮಾರು 12 ಕಿಲೋಮೀಟರ ದೂರದಲ್ಲಿರುವ,ಫಲವತ್ತಾದ ಭೀಮಾ ನದಿ ತೀರದ ಭೂಮಿಯಿಂದಲೂ ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ ಹೊಂದಿರುವ ಈ ಪಟ್ಟಣ ಕಲೆ,ಸಂಸ್ಕೃತಿ ಮತ್ತು ಧಾರ್ಮಿಕ ಕೇಂದ್ರದ ತವರೂರು.
ಇಲ್ಲಿ ಹಿಂದೂ, ಮುಸ್ಲೀಂ, ಜೈನ, ಕ್ರಿಶ್ಚಿಯನ್,ಶಿಖ್ ರು ಹಾಗೂ ಅಲೆಮಾರಿ ಪಂಗಡದವರು ಹಾಗೂ ಇವುಗಳ ನೂರಾರು ಜಾತಿ, ಉಪಜಾತಿಗಳ ಜನ ಇಲ್ಲಿ ನೆಲೆ ಕಂಡಿದ್ದಾರೆ. ಇಲ್ಲಿ ಹಿಂದೂ-ಮುಸ್ಲಿಂ ರ ಪ್ರಾಬಲ್ಯವಿದ್ದು, ಈ ಪಟ್ಟಣದ ಮಧ್ಯೆ ಬೋರಿ ನದಿ ಹಾಯ್ದು ಹೋಗಿರುತ್ತದೆ. ಈ ನದಿಗೆ ಒಂದು ದೊಡ್ಡ (ಜೀರಂಕಲಗಿ) ಹಳ್ಳ ಕೂಡಿ ಸಂಗಮವಾಗಿದೆ. ಈ ಸಂಗಮದ ದಡದಲ್ಲಿ ಚಡಚಣ ಪಟ್ಟಣದ ಆರಾಧ್ಯ ದೈವನಾಗಿ ಶ್ರೀ ಸಂಗಮೇಶ್ವರ ಜಾಗೃತ ದೇವಸ್ಥಾನವಿದೆ. ಇದರ ಹತ್ತಿರದಲ್ಲಿ ನಡೆದಾಡುವ ದೇವರಾದ, ಜಗತ್ತಿನ ಶ್ರೇಷ್ಟ ಸಂತ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ “ಗುರುದೇವ ಆಶ್ರಮವಿದೆ. ಭಕ್ತರಿಗೆ, ಸಾಧಕರಿಗೆ ಹಾಗೂ ಆಸ್ತಿಕರಿಗೆ ಈ ಆಶ್ರಮ ಒಂದು ಸ್ವರ್ಗ ಸಮಾನವಾಗಿದೆ. ಹಾಗೂ ಪೂಜ್ಯ ಸಿದ್ದೇಶ್ವರ ಶೀಗಳು ಶಿಕ್ಷಣ ಪಡೆದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಇದಾಗಿದೆ. ಹತ್ತಾರು ಗ್ರಾಮದ ಮಕ್ಕಳಿಗೆ ಶಿಕ್ಷಣದ ಸವಿರುಚಿ ಉಣಬಡಿಸುತ್ತ ಗಡಿನಾಡ ಶಿಕ್ಷಣ ಕಾಶಿಯಾಗಿದೆ ಎನ್ನಬಹುದು.
ಈ ಪಟ್ಟಣದಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯಾದ ಸುಪ್ರಸಿದ್ದ “ದಾವಲ ಮಲಿಕ್ ದರ್ಗಾ” ಇದೆ. ಹಿಂದೂ-ಮುಸ್ಲಿಂ ಬಾಂಧವರು ಈ ದರ್ಗಾಕ್ಕೆ ಭಕ್ತಿ ಭಾವದಿಂದ ಇವತ್ತಿಗು ನಡೆದುಕೊಳ್ಳುತ್ತಾ ಬಂದಿದ್ದಾರೆ. ಈ ಪಟ್ಟಣದಲ್ಲಿ ಹಿಂದಿನಿಂದ ಇಂದಿನವರೆಗೆ ಜಾತಿ ಹಾಗೂ ಧಾರ್ಮಿಕ ದಂಗೆಗಳಿಲ್ಲದೆ ಜನರು ಸಾಮರಸ್ಯದಿಂದ ಒಂದು ಕುಟುಂಬದಂತೆ ಜೀವನ ಸಾಗುಸುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ
ಅಧಿಕಾರ ಬೇಡ, ಹೆಸರು ಬೇಡ ಕೆಲಸ ಮಾಡಿದ ತೃಪ್ತಿಯೇ ನಮಗೆ ದೇವನೊಲುಮೆ” ಎಂದು ಸಂತೃಪ್ತ ಭಾವದಿಂದ ಬಾಳುವ ಸುಮಾರು 50 ಸಾವಿರಕ್ಕೀಂತಲೂ ಹೆಚ್ಚಿಗಿರುವ ಕನ್ನಡ ನಾಡಿನ ಕೊನೆಯ ಪುಟ್ಟ ಪಟ್ಟಣ, ಸ್ವಾತಂತ್ರ್ಯ ಸಂಗ್ರಾಮಕ್ಕೆ 50 ಜನರ ಹೋರಾಟಗಾರರನ್ನು ಕೊಟ್ಟ ಹೆಮ್ಮೆಯ ತಾಣ ಇದಾಗಿದೆ. ಸಾಹಿತಿ ಡಾ.ಸಿಂಪಿಲಿಂಗಣ್ಣನವರ ಜನ್ಮ ಹಾಗೂ ಕರ್ಮಭೂಮಿ ಇದಾಗಿದೆ. ಸುಮಾರು 72 ವರ್ಷಗಳ ಇತಿಹಾಸವಿರುವ ಈ ಜಾತ್ರೆಗೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇದೆ. ಪಟ್ಟಣದಿಂದ ಕೇವಲ 8 ಕಿ.ಮೀ ಅಂತರದಲ್ಲಿ ಇರುವ (ಸೊನಗಿ)ಸೊನ್ನಲಗಿ ಶ್ರೀ ಸಿದ್ದರಾಮನ ಜನ್ಮಸ್ಥಳವಾಗಿದ್ದರೆ, 60 ಕಿ.ಮೀ. ಅಂತರದ(ಸೊನ್ನಲಾಪುರ) ಸೋಲಾಪೂರ ಶ್ರೀ ಸಿದ್ದರಾಮನ ಕರ್ಮಭೂಮಿ ಆಗಿದೆ.

