ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ನಡೆಯುತ್ತಿರುವ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯು ಸ್ವಾಮಿ ವಿವೇಕಾನಂದ ಜಯಂತಿಯಂಗವಾಗಿ ಸೋಮವಾರ ಯುಥ್-ಅಥಾನ್ (ಮ್ಯಾರಥಾನ್) ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.
ಸ್ಪರ್ಧೆಗೆ ಬಸವೇಶ್ವರ ದೇವಾಲಯ ಮುಂಭಾಗ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಅನಿಲ ಅಗರವಾಲ ಚಾಲನೆ ನೀಡಿದರು.
ಬೆಳಗ್ಗೆ 6:45ಕ್ಕೆ ಆರಂಭವಾದ ಈ ಮ್ಯಾರಥಾನ್‌ನಲ್ಲಿ ಶಾಲೆಯ 6 ರಿಂದ 10 ನೇ ತರಗತಿಯವರೆಗಿನ ಒಟ್ಟು 355 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿ–ವಿದ್ಯಾರ್ಥಿನಿಯರು ಸುಮಾರು 3 ಲೋಮೀಟರ್ ದೂರದ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮರಳಿ ಶಾಲೆಗೆ ಬಂದರು. ನಂತರ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ವಿಜೇತರಿಗೆ ಪ್ರದಾನ ಮಾಡಲಾಯಿತು. ಜೊತೆಗೆ 50 ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್‌ಗಳನ್ನು ನೀಡಿ ಸಮಾರಂಭವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಎಸ್.ಎಸ್.ಝಳಕಿ, ಸದಸ್ಯರಾದ ಸುರೇಶಗೌಡ ಪಾಟೀಲ, ಡಾ.ವೀಣಾ ಗುಳೇದಗುಡ್ಡ, ಮುಖಂಡ ಕಲ್ಲು ಸೊನ್ನದ, ಶಾಲೆಯ ಪ್ರಾಚಾರ್ಯೆ ಆರ್.ಎಂ.ರೋಣದ, ಶಾಲಾ ಸಿಬ್ಬಂದಿ ಇತರರು ಇದ್ದರು.

