ಮರ ನೆಡುವ ಸಂದೇಶ | ಚಿತ್ರಕಲೆಗಳ ಪ್ರದರ್ಶನ | ಹಾಡುಗಳು ಮತ್ತು ವಚನಗಳ ಸುಧೆ | ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ
ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿನ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯ ವಿಶಾಲವಾದ ಆವರಣದಲ್ಲಿ ಸೋಮವಾರ ಸಂಜೆ ಸಂಕ್ರಾಂತಿ ಸಂಭ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ರುಚಿ-ಉತ್ಸವ ಆಹಾರ ಮೇಳವು ಜನಮನಸೂರೆಗೊಂಡಿತು.
ಆವರಣದ ಸ್ವಾಗತ ಕಮಾನು ಪ್ರವೇಶಿಸುತ್ತಿದ್ದಂತೆ ಸಾಲುಮರದ ತಿಮ್ಮಕ್ಕ ಸ್ಮರಣಾರ್ಥವಾಗಿ ಶಾಲೆಯ ಚಿತ್ರಕಲಾ ಶಿಕ್ಷಕ ಅಮಿತ ಕಮ್ಮಾರ ಅವರು ತಯಾರಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರ ಎಲ್ಲರನ್ನು ಮನಸೂರೆಗೊಳ್ಳುವ ಜೊತೆಗೆ ಮರ ನೆಡುವ ಸಂದೇಶ ಸಾರಿದ್ದು ವಿಶೇಷ.
ಮಳಿಗೆಗಳ ಮಧ್ಯದಲ್ಲಿ ಶಾಲೆಯ ವಿದ್ಯಾರ್ಥಿಗಳು ಬಿಡಿಸಿದ ವಿವಿಧ ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಎರಡು ಬದಿಯಲ್ಲಿಯ ತಾತ್ಕಾಲಿಕ ಮಳಿಗೆಗಳಲ್ಲಿ ತಿಂಡಿ ತಿನಿಸು ಖರೀದಿಸುತ್ತಿದ್ದ ಜನಜಂಗುಳಿ, ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಂಗೀತಗಾರರು ಹಾಡಿದ ಹಾಡುಗಳು, ವಚನಗಳು ಜನರನ್ನು ಸಂಗೀತ ಲೋಕಕ್ಕೆ ತೆಗೆದುಕೊಂಡು ಹೋದವು.
ವಿಶಾಲವಾದ ಶಾಲಾ ಆವರಣದಲ್ಲಿ ತಾತ್ಕಾಲಿಕ 20 ಮಳಿಗೆಗಳಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ ಬಗೆ ಬಗೆಯ ತಿನಿಸುಗಳನ್ನು ಉತ್ಸಾಹದಿಂದ ಮಾರಾಟ ಮಾಡಿದರು.
ಮಕ್ಕಳ ಕೈಚಳಕದಲ್ಲಿ ತಯಾರಾದ ಕೆಲ ಮಳಿಗೆಗಳ ತಿನಿಸುಗಳು ಕೆಲ ಹೊತ್ತಿನಲ್ಲೇ ಖಾಲಿಯಾಗಿದ್ದು ಕಂಡುಬಂದಿತು.
ಜನರು ಮಸಲಾ ಮಂಚ್, ಹ್ಯಾಪಿ ಬೈಟ್ಸ್, ರೂಲಿಂಗ್ ಬೈಟ್ಸ್, ಪ್ಲೇವರ್ ಟೇಸ್ಟ್, ಸಮೋಸಾ ಮಸಲಾ, ಜ್ಯೂಸ್, ದೇಶಿ ಡಿಲೈಟ್, ಬಿರಿಯಾನ್ ಚಾಟ್, ಪೊಪಾಯಿಡ್ ಪ್ಯಾರಡೈಸ್, ಕ್ರಂಚ್-ಮಂಚ್ ಸೇರಿದಂತೆ ವಿವಿಧ ಮಳಿಗೆಗಳಲ್ಲಿ ತಮಗೆ ಬೇಕಾದ ತಿಂಡಿ-ತಿನಿಸುಗಳನ್ನು ಖರೀದಿಸಿ ಸವಿದು ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲ ವಿದ್ಯಾರ್ಥಿಗಳಂತೂ ತಮ್ಮ ಮಳಿಗೆಯಲ್ಲಿ ಉತ್ತಮವಾದ, ಶುಚಿ-ರುಚಿ ತಿಂಡಿ ಸಿಗುತ್ತದೆ. ಖರೀದಿಸಿ ತಿನ್ನುವಂತೆ ಆಹಾರ ಮೇಳಕ್ಕೆ ಆಗಮಿಸಿದ್ದ ಪಾಲಕ ಬಾಂಧವರನ್ನು, ಜನರನ್ನು ಆಹ್ವಾನಿಸುವದು ಕಂಡುಬಂದಿತ್ತು. 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬಗೆಯ ತಿಂಡಿಗಳನ್ನು ಪಾಲಕರಿಗೂ ಹಾಗೂ ಸಾರ್ವಜನಿಕರಿಗೂ ಪ್ರತಿ ಟಿಕೆಟ್‌ಗೆ ₹20 ದರದಲ್ಲಿ ಮಾರಾಟ ಮಾಡಿದರು. ಒಟ್ಟು 6,700 ಟಿಕೆಟ್‌ಗಳು ಮಾರಾಟವಾಗಿದ್ದು ಉತ್ತಮ ಸ್ಪಂದನೆ ದೊರಕಿತು.ಮೇಳಕ್ಕೆ ಬಂದ ಬಹುತೇಕ ಜನರು, ಮಕ್ಕಳು ಸಾಲುಮರದ ತಿಮ್ಮಕ್ಕ ಮುಂಭಾಗ, ಶಾಲೆಯ ಹೆಸರಿನ ಕಟೌಟ್, ಅಲಂಕಾರಿಕ ಕಟೌಟ್ ಮುಂದೆ ಶೆಲ್ಪಿ ತೆಗೆದುಕೊಳ್ಳುವದು ಕಂಡುಬಂದಿತ್ತು.
ಆಹಾರ ಮೇಳದಲ್ಲಿ ಹೆಚ್ಚಿನ ಅಂಕ ಪಡೆದ ವಿವಿಧ ತಂಡದವರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.ನ್ಯಾಯಮಂಡಳಿಯ ತೀರ್ಪಿನಂತೆ 18ನೇ ಮಳಿಗೆಗೆ ಪ್ರಥಮ ಸ್ಥಾನ,
20ನೇ ಮಳಿಗೆಗೆ ದ್ವಿತೀಯ ಸ್ಥಾನ ಮತ್ತು 19ನೇ ಮಳಿಗೆಗೆ ತೃತೀಯ ಸ್ಥಾನ ಪ್ರದಾನ ಮಾಡಲಾಯಿತು.
ಆಹಾರ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮಕ್ಕಳಿಗೆ ಪಠ್ಯದ ಜೊತೆಗೆ ವ್ಯವಹಾರಿಕ ಜ್ಞಾನ ಬೆಳೆಸುವುದು. ಆಹಾರ ತಯಾರಿಸುವದು ಒಂದು ಕಲೆಯಾಗಿದೆ. ಆಹಾರ ತಯಾರಿಸುವ ಕಲೆಯನ್ನು ಬೆಳೆಸಲು ಇಂತಹ ಮೇಳಗಳು ಸಹಕಾರಿಯಾಗಲಿವೆ. ಮಕ್ಕಳ ಇಂತಹ ಕಾರ್ಯಕ್ಕೆ ಪಾಲಕರು ಪ್ರೋತ್ಸಾಹಿಸಬೇಕು. ಪಾಸ್ಟ್-ಪುಡ್ ಆರೋಗ್ಯಕ್ಕೆ ಉತ್ತಮವಲ್ಲ. ನಿತ್ಯವೂ ಇಂತಹ ಆಹಾರವನ್ನು ನಾವು ಸೇವಿಸಬಾರದು. ಯಾವಾಗಲಾದರೊಮ್ಮೆ ಪಾಸ್ಟ್-ಪುಡ್ ತಿನ್ನಬಹುದು. ಶಾಲೆಯಲ್ಲಿ ಶಿಸ್ತು, ವಿನಯ, ಪರಸ್ಪರ ಸಹಕಾರ-ಮಮತೆಯಿಂದ ವಿದ್ಯಾರ್ಥಿಗಳು ಇರಬೇಕು. ಶಾಲೆಯಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ವಿದ್ಯಾರ್ಥಿಗಳನ್ನು ತಯಾರಿಸುವಂತಾದರೆ ಅವರ ಭವಿಷ್ಯ ಉಜ್ವಲವಾಗುವದರಲ್ಲಿ ಸಂದೇಹವಿಲ್ಲ. ಇಂತಹ ಚಟುವಟಿಕೆಗಳನ್ನು ಈ ಶಾಲೆಯು ನಡೆಸಿಕೊಂಡು ಬರುತ್ತಿರುವದು ಶ್ಲಾಘನೀಯ ಎಂದು ಹೇಳಿದರು.
ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಎಂ.ಜಿ.ಆದಿಗೊಂಡ, ಸುರೇಶಗೌಡ ಪಾಟೀಲ ಮಾತನಾಡಿದರು.
ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಅನಿಲ ಅಗರವಾಲ,ಉಪಾಧ್ಯಕ್ಷ ಎಸ್.ಎಸ್.ಝಳಕಿ, ಸದಸ್ಯರಾದ ಲಕ್ಷ್ಮೀ ಮಾಲಗಾರ,ಪ್ರಭಾವತಿ ರಾಯಗೊಂಡ, ಲಕ್ಷ್ಮೀ ಹಿಟ್ನಳ್ಳಿ, ಮಿನಾಕ್ಷಿ ಮೋದಿ, ಬೇಬಿ ಗಣಾಚಾರಿ, ಪ್ರಾಚಾರ್ಯ ರೋಹಿಣಿ ರೋಣದ, ಶಾಲಾ ಸಿಬ್ಬಂದಿ, ಇತರರು ಇದ್ದರು.

