ಉದಯರಶ್ಮಿ ದಿನಪತ್ರಿಕೆ
ಗದ್ದಿಗೆ: ಸೇವೆ ಎನ್ನುವ ಪದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾಮನೋಭಾವದಿಂದ ನೀಡುವ ಸಹಾಯವೇ ಸೇವೆ. ಸೇವಾ ಚಟುವಟಿಕೆ ನಮ್ಮ ಜೀವನದ ಅವಿಭಾಜ್ಯ ಭಾಗ ಹಾಗೂ ಸ್ವಭಾವವಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಟೇಗೌಡ ಅಭಿಪ್ರಾಯಪಟ್ಟರು.
ಹುಣಸೂರು ತಾಲೂಕಿನ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇವಸ್ಥಾನ ಆವರಣದಲ್ಲಿ ಜೆಎಸ್ ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಬಗ್ಗೆ ಕೆಲವರಲ್ಲಿ ತಪ್ಪು ತಿಳುವಳಿಕೆ ಇದೆ. ಯಾವುದೋ ಒಂದು ಕಡೆ ಹೋಗಿ ಕಸ ಸಂಗ್ರಹ ಮಾಡುವುದು, ಚರಂಡಿ ಸ್ವಚ್ಛ ಮಾಡಿಸಿ, ಒಂದು ಫೋಟೋ ತೆಗೆದು ಹಾಕ್ತಾರೆ ಎಂಬ ಭಾವನೆ ಬಹುತೇಕ ಜನರಲ್ಲಿ ಇದೆ. ಆದರೆ ರಾಷ್ಟ್ರೀಯ ಸೇವಾ ಯೋಜನೆ ಒಂದು ಶಿಸ್ತಿನ ಸಿಪಾಯಿ ಇದ್ದಂತೆ. ನಿಮ್ಮಲ್ಲಿ ಕೀಳರಿಮೆ ಹೋಗಲಾಡಿಸಿ, ನಿಮ್ಮಲ್ಲಿರುವ ಆತ್ಮಸ್ಥೆರ್ಯವನ್ನು ಹೆಚ್ಚಿಸುತ್ತಿದೆ. ಮಾದರಿ ಸಮಾಜವನ್ನಾಗಿ ಮಾಡಲು ಪ್ರೇರೇಪಿಸುತ್ತೆ. ವಿದ್ಯಾರ್ಥಿಗಳಲ್ಲಿರುವ ಕಲಾ ಪ್ರತಿಭೆಯನ್ನು ಹೊರ ತರಲು ವೇದಿಕೆ ಮಾಡಿಕೊಡುತ್ತೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ವಿದ್ಯಾರ್ಥಿ ತನ್ನ ಜೀವನದಲ್ಲಿ ಒಬ್ಬ ಉತ್ತಮ ಆದರ್ಶ ವಿದ್ಯಾರ್ಥಿಯಾಗುತ್ತಾನೆ. ವಿಶೇಷ ಶಿಬಿರಗಳನ್ನು ಏರ್ಪಡಿಸಿದಂತಹ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿನ ಜನಜೀವನದ ಬದುಕಿನ ಒಡನಾಟದ ಚಿತ್ರಣವನ್ನು ನೇರವಾಗಿ ಕಂಡರಿಯುತ್ತಾನೆ. ಮುಂದೊಂದು ದಿನ ಒಳ್ಳೆಯ ಸ್ಥಾನ ದೊರೆತ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಸಾಮಾಜಿಕ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಕುಂಟೇಗೌಡರು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ. ಸುರೇಶ ಮಾತನಾಡಿ, ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ವ್ಯಕ್ತಿಯ ವಿಕಸನ ಆಗುತ್ತೆ. ಇಲ್ಲದಿದ್ದರೆ. ಅವರು ಪುಸ್ತಕದ ಹುಳುಗಳಾಗಿ ಬದುಕು ಕಟ್ಟಿಕೊಳ್ಳಲು ಪರದಾಡಬೇಕಾಗುತ್ತೆ. ಇಂತಹ ಸೇವೆಯಲ್ಲಿ ತೊಡಗಿಸಿಕೊಂಡಾಗ ಆ ವ್ಯಕ್ತಿ ಸಮಾಜವನ್ನು ಪ್ರೀತಿಸುತ್ತೇನೆ. ಸಮಾಜವನ್ನು ಗೌರವಿಸುತ್ತಾನೆ, ಮತ್ತೊಬ್ಬರಿಗೆ ಮಾದರಿಯಾಗುತ್ತಾನೆ. ನಾಯಕತ್ವ ಗುಣ ಬೆಳೆಸಿಕೊಳ್ಳುತ್ತಾನೆ. ದೈನಂದಿನ ಮತ್ತು ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನೀಡುವುದರಿಂದ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ. ಹಳ್ಳಿ ಜನರಿಗೆ ಆರೋಗ್ಯ, ಕಾನೂನು, ಪರಿಸರ ನೈರ್ಮಲ್ಯ, ಶಿಕ್ಷಣ, ಸಾಮಾಜಿಕ ಪಿಡುಗುಗಳು, ಭ್ರಷ್ಟಾಚಾರ ನಿರ್ಮೂಲನೆ, ಸ್ತ್ರೀಸಬಲೀಕರಣ ಇತ್ಯಾದಿ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಜಾಗೃತಿ ಉಂಟಾಗುತ್ತದೆ ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಹಾಡುಗಾರ ಡಾ.ಅಮ್ಮ ರಾಮಚಂದ್ರ ಮಾತನಾಡಿ, ಇವತ್ತು ನಾನು ಅಂತಾರಾಷ್ಟ್ರೀಯ ಮಟ್ಟದ ಹಾಡುಗರನಾಗಿ ಕಾಣಿಸಿಕೊಳ್ಳುವುದಕ್ಕೆ ರಾಷ್ಟ್ರೀಯ ಸೇವಾ ಯೋಜನೆಯೇ ಕಾರಣ ಎಂದು ಹೇಳಿದರು.
ಶಿಬಿರದ ಅಂಗವಾಗಿ ಸ್ವಯಂಸೇವಕರ ಸಾಂಸ್ಕೃತಿಕ, ನೈತಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ, ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಭಗವದ್ಗೀತೆ ಪುಸ್ತಕಗಳನ್ನು ಕುಂಟೇಗೌಡರುವಿತರಿಸಿದರು.
ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಡಾ.ಎಂ.ಪ್ರಭು, ಶಿಬಿರಾಧಿಕಾರಿ ಎನ್ ಸಂತೋಷ್ ಕುಮಾರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ. ಸುರೇಶ, ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ.ವಿ.ಸಾಂಬಶಿವಯ್ಯ , ಸಿಂಗಮಾರನಹಳ್ಳಿ ಫ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್ ಎಸ್ ಸುಂದರ್ , ಯಮುನಾ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

