ದಾನಿಗಳ ನೆರವು, ಗುಣಮಟ್ಟ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಗೆ ಆದ್ಯತೆ
ಉದಯರಶ್ಮಿ ದಿನಪತ್ರಿಕೆ
ವರದಿ: ಶ್ರೀಕಂಠ ಈಶ್ವರ್
ಹೆಚ್ ಡಿ ಕೋಟೆ: ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳು ನಿರ್ಲಕ್ಷ್ಯಗೊಳಗಾಗುತ್ತಿವೆ ಎಂಬ ಅಪವಾದ ಇದೆ. ಶಾಲೆಗಳ ಸುಧಾರಣೆಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡರೂ ಸರ್ಕಾರಿ ಶಾಲೆಗಳು ಏಳಿಗೆ ಕಾಣುತ್ತಿಲ್ಲ. ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. ಆದರೆ ಇದೆಲ್ಲದಕ್ಕೂ ಅಪವಾದ ಎಂಬಂತೆ ಇಲ್ಲೊಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು, ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳನ್ನೇ ತನ್ನೆಡೆಗೆ ಸೆಳೆಯುತ್ತಿದೆ.
ಹೆಚ್ ಡಿ ಕೋಟೆ ತಾಲೂಕಿನ ಯಲಮತ್ತೂರು ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಣಮಟ್ಟದ ಶಿಕ್ಷಣ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ. ಗುಣಮಟ್ಟದ ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಬಲವಾಗಿ ನಂಬಿರುವ ಇಲ್ಲಿನ ಶಿಕ್ಷಕರು ಕ್ರಿಯಾ ಯೋಜನೆ ರೂಪಿಸಿ ಮಕ್ಕಳ ಬುದ್ದಿ ಮಟ್ಟಕ್ಕೆ ತಕ್ಕಂತೆ ಬೋಧನೆ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಗೇಟ್ ತೆರೆದು ಒಳಹೋದರೆ, ಹೈಟೆಕ್ ಖಾಸಗಿ ಶಾಲೆಗೆ ಹೋದಂತೆ ಅನುಭವವಾಗುತ್ತೆ. ಶಾಲೆ ಸುತ್ತಲೂ ಕಂಪೌಂಡ್ ನಿರ್ಮಿಸಲಾಗಿದೆ. ಶಾಲೆ ಅಂಗಳದಲ್ಲಿ ಕೈ ತೋಟ ಮಾಡಲಾಗಿದೆ. ಶುದ್ಧ ಗಾಳಿ ಬೀಸಲು ಅನೇಕ ಗಿಡಗಳನ್ನು ನೆಡಲಾಗಿದೆ. ಆಟವಾಡಲು ವಿಶಾಲವಾದ ಮೈದಾನವಿದೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ ರಂಗಮಂಟಪವಿದೆ. ಆಟದ ವೇಳೆ ಸುಸ್ತಾದ ವಿಶ್ರಾಂತಿ ಪಡೆಯಲು ಕಲ್ಲಿನ ಬೆಂಚ್ ವ್ಯವಸ್ಥೆ ಇದೆ. ಗಂಡು-ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಶೌಚಾಲಯ ಕೊಠಡಿ ಇದೆ.

ತಾಲೂಕಿನಲ್ಲೇ ಮಾದರಿ ಸರ್ಕಾರಿ ಶಾಲೆ
ಒಂದರಿಂದ 5ನೇ ತರಗತಿ ಇರುವ ಈ ಶಾಲೆಗೆ ಇಬ್ಬರೇ ಶಿಕ್ಷಕರು. ಆದರೆ ಯಾವತ್ತೂ ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲಿ ರಾಜಿಯಾಗಿಲ್ಲ. ತಾವು ತರಗತಿಯಲ್ಲಿ ಇಲ್ಲದಿದ್ದರೂ ಮಕ್ಕಳು ಸುಖಾಸುಮನ್ನೇ ಕುಳಿತುಕೊಂಡು ಕಾಲಹರಣ ಮಾಡಬಾರದು ಎಂದೇಳಿ ಸ್ಮಾರ್ಟ್ ಕ್ಲಾಸ್ ಓಪನ್ ಮಾಡಲಾಗಿದೆ. ಕಂಪ್ಯೂಟರ್, ಪ್ರೊಜೆಕ್ಟರ್, ಇಂಟರಾಕ್ಟಿವ್ ವೈಟ್‌ಬೋರ್ಡ್ ಮತ್ತು ಆಡಿಯೋ-ವಿಡಿಯೋ ಪರಿಕರಗಳನ್ನು ಬಳಸಿ, ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರ್ಥವಾಗುವಂತೆ ಮತ್ತು ಆಸಕ್ತಿದಾಯಕವಾಗಿ ಕಲಿಸಲಾಗುತ್ತದೆ. ಕೊಠಡಿ ಒಳಗೆ ಶೂ ನಿಷೇಧಿಸಲಾಗಿದೆ. ಈ ಮೂಲಕ ಸರಸ್ವತಿಗೆ ಗೌರವ ಮತ್ತು ತರಗತಿ ಒಳಗೆ ಸೋಂಕು ಹರಡದಂತೆ ತಡೆಯುವ ಉದ್ದೇಶವಾಗಿದೆ. ತರಗತಿಗಳ ಗೋಡೆ ಮೇಲೆಲ್ಲಾ ಕಾಗುಣಿತ ಅಕ್ಷರಗಳು, ವರ್ಣಮಾಲೆ ಅಕ್ಷರಗಳನ್ನು ಬಿಡಿಸಲಾಗಿದೆ. ಅಲ್ಲದೆ ಪ್ರಮುಖ ಸ್ಥಳಗಳ ಮಾಹಿತಿ, ಅದರ ಪ್ರಾಮುಖ್ಯತೆ, ನಮ್ಮ ದೇಶ ಯಾವುದು, ನಮ್ಮ ರಾಜ್ಯ ಯಾವುದು, ಹೀಗೆ ದೇಶದ ಪ್ರಮುಖ ವಿವರಗಳನ್ನು ಗೋಡೆಗಳಲ್ಲಿ ಬರೆಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ತಿಳಿಸಿಕೊಡುವ ಉದ್ದೇಶವಾಗಿದೆ.
ಮುಖ್ಯ ಶಿಕ್ಷಕ ಮುಕುಂದರಾಜುಗೆ ಹ್ಯಾಟ್ಸಾಪ್
8 ವರ್ಷಗಳ ಹಿಂದೆ ಈ ಶಾಲೆ ಪಾಳುಬಿದ್ದ ಕಟ್ಟಡದಂತಿತ್ತು. ಮಳೆ ಬಂದ್ರೆ ಮೇಲ್ಚಾವಣಿ ಶಿಥಿಲಗೊಂಡು ಸೋರುತ್ತಿತ್ತು. ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್ ಇರಲಿಲ್ಲ. ಮೂಲಸೌಕರ್ಯ ಕೊರತೆ ಎದ್ದುಕಾಣುತ್ತಿತ್ತು. ಹೀಗಾಗಿ ಶಾಲೆಯ ಅವ್ಯವಸ್ಥೆ ಕಂಡು ಇಲ್ಲಿನ ಜನ ಮಕ್ಕಳನ್ನು ಪಟ್ಟಣದ ಕಾನ್ವೆಂಟ್ ಗಳಿಗೆ ಸೇರಿಸುತ್ತಿದ್ದರು. ಆದರೆ ಮುಖ್ಯ ಶಿಕ್ಷಕ ಮುಕುಂದರಾಜು ಈ ಶಾಲೆಗೆ ವರ್ಗಾವಣೆ ಆಗಿ ಶಾಲೆಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾವಣೆ ಮಾಡಿದ್ದಾರೆ. ಶಾಲೆಯ ಗೋಡೆಗಳು ಸುಣ್ಣಬಣ್ಣ ಕಂಡಿದೆ. ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ.
ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿದ್ದಾರೆ. ಇವರಿಗೆ ಸಹಶಿಕ್ಷಕ ನಾಗರಾಜು, ಹೆಚ್ ಎಸ್ ಸಾಥ್ ನೀಡಿದ್ದಾರೆ.
“ನಾನು ಬರುವುದಕ್ಕೂ ಮುನ್ನ ಈ ಶಾಲೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದುಕೊಂಡು, ಮಕ್ಕಳು ತಿರುಗಾಡಲು ಕೂಡ ಕಷ್ಟವಾಗಿತ್ತು. ಕಟ್ಟಡ ಶಿಥಿಲಗೊಂಡು ಮಳೆ ಬಂದ್ರೆ ಸೋರುತ್ತಿತ್ತು. ಹಳೆ ವಿದ್ಯಾರ್ಥಿಗಳ ಸಂಘ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಮೂಲಸೌಕರ್ಯ ಕಲ್ಪಿಸಲಾಗಿದೆ. ಇಲ್ಲಿನ ಶೈಕ್ಷಣಿಕ ಪ್ರಗತಿ ಕಂಡು ದೂರದ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳನ್ನು ಇಲ್ಲಿಗೆ ತಂದು ಸೇರಿಸಿದ್ದಾರೆ.”
– ಮುಕುಂದರಾಜು
ಮುಖ್ಯ ಶಿಕ್ಷಕರು
“1ರಿಂದ 4ನೇ ತರಗತಿ ಇರುವ ಈ ಶಾಲೆಗೆ ಇಬ್ಬರೇ ಟೀಚರ್. ಸಮಯ ನೋಡದೆ ಮಕ್ಕಳ ಕಲಿಕೆಗೆ ಹೆಚ್ಚಿನ ಹೊತ್ತು ಕೊಡುತ್ತಿದ್ದಾರೆ. ಆದರೆ ಮತ್ತಿಬ್ಬರು ಶಿಕ್ಷಕರನ್ನು ನೇಮಿಸಿದ್ರೆ, ಮಕ್ಕಳ ಕಲಿಕೆಗೆ ಮತ್ತಷ್ಟು ಅನುಕೂಲವಾಗಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಹೆಚ್ಚಿನ ಗಮನಹರಿಸಬೇಕಾಗಿದೆ.”
– ಸುರೇಶ
ಗ್ರಾ.ಪಂ. ಮಾಜಿ ಸದಸ್ಯರು
ಬಿಸಿ ಬಿಸಿ ಇಡ್ಲಿ – ದೋಸೆ
ಬಿಸಿಯೂಟದಲ್ಲಿ ಇಲ್ಲಿಯವರೆಗೆ ಯಾವುದೇ ಆರೋಪಗಳು ಮಕ್ಕಳಿಂದ, ಸಾರ್ವಜನಿಕರಿಂದ ಕೇಳಿಬಂದಿಲ್ಲ. ದಿನಾಲೂ ಇಡ್ಲಿ, ದೋಸೆ, ಪೂರಿ ಸೇರಿದಂತೆ ವೆರೈಟಿ ಫುಡ್ ನೀಡಲಾಗುತ್ತೆ. ತಮ್ಮ ಜಮೀನಿನಲ್ಲಿ ಬೆಳೆಯುವ ತರಕಾರಿಗಳನ್ನು ಮಕ್ಕಳ ಪೋಷಕರು ತಂದುಕೊಡುತ್ತಾರೆ. ಹೀಗಾಗಿ ದಿನಾಲೂ ರುಚಿಶುಚಿಯಾದ ಸಾಂಬಾರ್ ತಯಾರು ಮಾಡಲು ಸಾಧ್ಯವಾಗುತ್ತೆ ಎಂದು ಹೇಳುತ್ತಾರೆ ಬಿಸಿಯೂಟ ಸಿಬ್ಬಂದಿ.

