ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಈ ಭಾಗದ ಹೆಚ್ಚು ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆ ಬೆಳೆದಿದ್ದಾರೆ ನೀರು ಹೆಚ್ಚು ಬೇಕು. ರೈತರ ಬೆಳೆಗಳಿಗೆ ಮುಳವಾಡ 1 ನೇ ಹಂತದ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಿಗೆ ನೀರು ಹರಿಸಬೇಕು. ಕೆನಾಲ್ ಮೇಲಿನ ಪಕ್ಕದ ರಸ್ತೆಗಳು ಹದಗೆಟ್ಟು ಹೋಗಿದ್ದು ಅವುಗಳನ್ನು ಈ ಭಾಗದ ಶಾಸಕ ಸಚಿವ ಶಿವಾನಂದ ಪಾಟೀಲ ಅವರು ವಿಶೇಷ ಅನುದಾನ ತಂದು ಸುಧಾರಣೆ ಮಾಡಿಸುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದರು.
ತಾಲೂಕಿನ ಮಟ್ಟಿಹಾಳ ಕ್ರಾಸ ಬಳಿ ಇರುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮುಳವಾಡ ಏತ ನೀರಾವರಿ ವಿಭಾಗ-ನಂ.1ರ ಕಾರ್ಯನಿರ್ವಾಹಕ ಅಭಿಯಂತರ ರವರ ಕಛೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಭಾಗದ ರೈತರ ಜಮೀನುಗಳಲ್ಲಿ ಕಾಲುವೆ ಹಾಯ್ದು ಹೋಗಿವೆ ಅದರಿಂದ ರೈತರು ಜಮೀನು ಕಳೆದುಕೊಂಡಿದ್ದಾರೆ. ಅನೇಕ ರೈತರಿಗೆ ಪರಿಹಾರ ದೊರಕಿಲ್ಲ ರೈತರಿಗೆ ಶೀಘ್ರವಾಗಿ ಪರಿಹಾರ ನೀಡಬೇಕು. ಜೋತೆಗೆ ಕಾಲುವೆಗಳಲ್ಲಿ ಹೂಳು ತುಂಬಿದೆ ಸ್ವಚ್ಛ ಮಾಡುವ ಈ ಕಾರ್ಯ ಎಪ್ರಿಲ್ 24 ನಂತರ ಜೂನ್ ವರೆಗೆ ಎಲ್ಲಾ ಕಾಲುವೆಗಳ ಹೂಳು ತೆಗೆಯುವ ಕಾರ್ಯ ಆಗಬೇಕು ಎಂದು ಹೇಳಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಕೆನಾಲ್ ಕಾಲುವೆಗಳಿಗೆ ಸತತವಾಗಿ 8 ರಿಂದ 9 ತಿಂಗಳವರೆಗೆ ನಮ್ಮ ಕಾಲುವೆಗಳಿಗೆ ನೀರನ್ನು ಹರಿಸಬೇಕು ಕಳೆದ ಎರಡು ಮೂರು ವರ್ಷಗಳಿಂದ ಅಧಿಕಾರಿಗಳು ಕಾಲುವೆ ನೀರನ್ನು ಹಂತ ಹಂತವಾಗಿ ಬಂದ್ ಮಾಡುತ್ತಾ ಬಂದ್ರು ಅದಕ್ಕಾಗಿ ನಾವು ರೈತರೊಂದಿಗೆ ಸಂಘಟನೆ ಮಾಡಿಕೊಂಡು ರಸ್ತೆಗೆ ಇಳಿಯಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಕೆಬಿಜೆಎನ್ಎಲ್ ಎಸ್ಇ ಗೋವಿಂದ ರಾಠೋಡ, ಸಿಪಿಐ ಶರಣಗೌಡ ಗೌಡರ, ಪಿಎಸ್ಐ ಅಶೋಕ ನಾಯಕ, ಎನ್ ಟಿಪಿಸಿ ಕೂಡಗಿ ಪಿಎಸ್ಐ ಯತೀಶ್ ಕೆ ಎನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಕಲ್ಲಪ್ಪ ಸೋನ್ನದ, ರಾಹುಲ್ ಕುಬಕಡ್ಡಿ, ಸಂಗಮೇಶ ಸಗರ, ಟಿ.ಟಿ. ಹಗೆದಾಳ, ಶ್ರೀಶೈಲ ಅಂಗಡಿ, ಜಗದೀಶ ಸುನಗದ, ಕಲ್ಲಪ್ಪ ಗಿಡ್ಡಪ್ಪಗೋಳ, ವಿಜಯಮಾಂತೇಶ ಗಿಡ್ಡಪ್ಪಗೋಳ, ಮಂಜುನಾಥ ದ್ಯಾವಾಪೂರ, ಮಲ್ಲಪ್ಪ ಗಾಣಗೇರ, ಕೆಬಿಜೆಎನ್ಎಲ್ ಅಧಿಕಾರಿಗಳು ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.
” ಈ ಮೊದಲು ಮುಳವಾಡ 1 ನೇ ಹಂತದ ಪಚ್ಚಿಮ, ಪೂರ್ವ ಕಾಲುವೆಗಳಿಗೆ 14 ದಿನ ನೀರನ್ನು ಹರಿಸಿ 10 ದಿನ ಬಂದ್ ಮಾಡಲಾಗುತ್ತಿತ್ತು ರೈತರ ಪ್ರತಿಭಟನೆ ನಂತರ ಅವರ ಬೇಡಿಕೆಯಂತೆ ಜ 16 ರಿಂದ ಏಪ್ರಿಲ್ 2 ರ ವರೆಗೆ ಕಾಲುವೆಗಳಿಗೆ 10 ದಿನ ನೀರನ್ನು ಹರಿಸಿ 7 ದಿನ ಬಂದ್ ಮಾಡಲಾಗುತ್ತದೆ.”
– ಗೋವಿಂದ ರಾಠೋಡ
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮೇಲ್ವಿಚಾರಣೆ ಅಧಿಕಾರಿ (ಎಸ್ ಇ)
“ಜಿಲ್ಲೆಯ ತಿಡಗುಂದಿಯ ಸುಮಾರು 1200 ಎಕರೆ ಅತ್ಯಂತ ಫಲವತ್ತಾದ ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಬಿಡುವುದಿಲ್ಲ, ಜಿಲ್ಲೆಯಲ್ಲಿ ಕೃಷಿಗೆ ಯೋಗ್ಯವಲ್ಲದ ಭೂಮಿಗೆ ಈ ಯೋಜನೆಯನ್ನು ಸ್ಥಳಾಂತರಿಸಬೇಕು.”
– ಚೂನಪ್ಪ ಪೂಜಾರಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ

