ಉದಯರಶ್ಮಿ ದಿನಪತ್ರಿಕೆ
ಚಡಚಣ: ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾತೃ ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನರ ಸಹಭಾಗಿತ್ವದೊಂದಿಗೆ ರಾಜ್ಯವ್ಯಾಪಿಯಾಗಿ ಶ್ರದ್ಧಾ ಕೇಂದ್ರಗಳ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
“ನಮ್ಮೂರು – ನಮ್ಮ ಶ್ರದ್ಧಾ ಕೇಂದ್ರ” ಎಂಬ ಧ್ಯೇಯವಾಕ್ಯದೊಂದಿಗೆ ಸ್ವಯಂಸೇವಕರು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸ್ಥಳೀಯರು ಕೈಜೋಡಿಸಿ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛತೆಗೊಳಿಸಿದರು.
ಮಕರ ಸಂಕ್ರಾಂತಿ, ಅಂದರೆ ಉತ್ತರಾಯಣ ಪುಣ್ಯಕಾಲದ ಅಂಗವಾಗಿ ಜನವರಿ 14ರಂದು ಪೂಜಾಮಂದಿರಗಳು ಸ್ವಚ್ಛತೆ ಮತ್ತು ಪವಿತ್ರತೆಯಿಂದ ಕೂಡಿರಬೇಕು ಎಂಬುದು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶಯವಾಗಿದ್ದು, ಅದರಂತೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು.
ಚಡಚಣ ವಲಯದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮಿ ದೇವಸ್ಥಾನ, ಶ್ರೀ ಎಲ್ಲಮ್ಮ ದೇವಸ್ಥಾನ, ಶ್ರೀ ಶಂಕರಲಿಂಗ ದೇವಸ್ಥಾನ, ಶ್ರೀ ಪರಮಾನಂದ ದೇವಸ್ಥಾನ, ಶ್ರೀ ಮಾತಾಂಗಿ ದೇವಸ್ಥಾನ, ಶ್ರೀ ಮಹಾದೇವ ಮಂದಿರ, ನಿವರಗಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಹತ್ತಳ್ಳಿಯ ಶ್ರೀ ಜಕ್ಕರಾಯ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಊರಿನ ಗಣ್ಯರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಸೇವಾಪ್ರತಿನಿಧಿಗಳು ಭಾಗವಹಿಸಿ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛತೆಗೊಳಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಲಯದ ಮೇಲ್ವಿಚಾರಕ ಶಿವಯ್ಯ ಹಿರೇಮಠ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು

