ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸದ್ಗುರು ಶ್ರೀ ಚಿನ್ಮಯಮೂರ್ತಿ ತ್ರಿಮೂರ್ತಿ ಮಹಾಶಿವಯೋಗಿಗಳ 32ನೇ ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ಇಂಡಿ ತಾಲೂಕಿನ ಗೊಳಸಾರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಬೇನೂರ ಮತ್ತು ಅಗರಖೇಡ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಬಿರಿ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ಸೋಮವಾರ ನಡೆಯಿತು.
ಶ್ರೀ ತ್ರಿಮೂರ್ತಿ ಮಹಾಶಿವಯೋಗಿಗಳ ಭಾವಚಿತ್ರಕ್ಕೆ ಪೂಜಿಸುವ ಮತ್ತು ಸಸಿಗೆ ನೀರುಣಿಸುವ ಮೂಲಕ ಅಭಿನವ ಪುಂಡಲಿಂಗ ಶ್ರೀಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಬಿರದ ಸಂಚಾಲಕ ಮತ್ತು ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ, ಗೊಳಸಾರ ಮಠದ ಜನಹಿತದ ಕಾರ್ಯಗಳು ಅನನ್ಯ. ಪ್ರತಿ ವರ್ಷ ಸದ್ಗುರು ಶ್ರೀ ಪುಂಡಲಿಂಗೇಶ್ವರ ಮತ್ತು ಶ್ರೀ ತ್ರಿಮೂರ್ತಿ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ವರ್ಷದಲ್ಲಿ ಎರಡು ಸಲ ಬಿ.ಎಲ್.ಡಿ.ಇ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ ನಡೆಸಲು ಅವಕಾಶ ನೀಡುತ್ತಾರೆ. ಭಕ್ತರ ಆರೋಗ್ಯ ಕಾಪಾಡುತ್ತಿರುವ ಅಭಿನವ ಪುಂಡಲಿಂಗ ಶ್ರೀಗಳ ಕಾರ್ಯ ಸ್ಮರಣೀಯವಾಗಿದೆ. ಜನಸಾಮಾನ್ಯರು ಸ್ವಚ್ಛ ಪರಿಸರ, ಸಾತ್ವಿಕ ಆಹಾರ, ನಿಯಮಿತ ವ್ಯಾಯಾಮ, ಅಧ್ಯಾತ್ಮ, ಸಕಾರಾತ್ಮಕ ಚಿಂತನೆ ಮತ್ತು ದುಶ್ಚಟಗಳಿಂದ ದೂರವಿರುವ ಮೂಲಕ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಹ್ರದಯ, ಲಿವರ್, ಕಿಡ್ನಿ, ಮೆದುಳು ಸೇರಿದಂತೆ ಎಲ್ಲ ಅತ್ಯಾಧುನಿಕ, ಸಾಮಾನ್ಯ ಮತ್ತು ಸೂಪರ್ ಸ್ಪೆಷಾಲಿಟಿ ವಿಶ್ವ ದರ್ಜೆಯ ಆರೋಗ್ಯ ಸೇವೆಗಳು ಉಚಿತ ಅಥವಾ ಅತೀ ಕಡಿಮೆ ದರದಲ್ಲಿ ಲಭ್ಯವಿದ್ದು ವಿಜಯಪುರ ಮತ್ತು ನೆರೆಯ ಜಿಲ್ಲೆಗಳ ಜನರು ಇದರ ಸದುಪಯೋಗವನ್ನು ಪಡೆಯಲು ಕೋರಿದರು. 18 ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲ ಆರೋಗ್ಯವಂತ ಯುವಕ ಯುವತಿಯರು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದು. ಇದರಿಂದ ಹೊಸ ರಕ್ತ ಉತ್ಪತ್ತಿಯಾಗಿ ಹೊಸ ಚೈತನ್ಯಯುತ ಜೀವನ ಸಾಗಿಸಬಹುದು. ಈ ನಿಟ್ಟಿನಲ್ಲಿ ಚಿಕ್ಕಬೇನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಶಾಂತ ಧೂಮಗೊಂಡ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರೋಡಗಿಯ ಶಿವಲಿಂಗೇಶ್ವರ ಶ್ರೀಗಳು, ಯಂಕಂಚಿಯ ಮಲ್ಲಿಕಾರ್ಜುನ ಶ್ರೀಗಳು, ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಜೇಶ ಕೋಳೆಕರ, ಡಾ. ಜಾಧವ, ಡಾ. ಚೈತ್ರಾ, ರವಿ ವಂದಾಲ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಹರೀಶ ಸುನಗದ, ಡಾ.ಸುಮಾ, ಡಾ.ಗೌರವ, ಸಹಾಯಕ ಸಿಬ್ಬಂದಿಗಳಾದ ಲಕ್ಷ್ಮೀ, ಮಂಜುನಾಥ, ದೀಪಕ, ಆತನೂರ, ಅಂಕಲಗಿ, ಗೋಟ್ಯಾಳ, ವೈ ಎಂ ಪೂಜಾರಿ ಸುಮಾರು 300 ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿದರು. ಅಲ್ಲದೇ, 75 ಜನರಿಗೆ ನೇತ್ರ ಮತ್ತು ಇತರೆ ಶಸ್ತ್ರಚಿಕಿತ್ಸೆ ಅವಶ್ಯವಿರುವ ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.
ಇದೇ ವೇಳೆ 10 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

