ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಮಾಜದಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟ್ ಸರ್ಕಾರಕ್ಕಿಂತ ಹೆಚ್ಚು ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಲಯ ಮಟ್ಟದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದ ಕಷ್ಟಕಾರ್ಪಣ್ಯಗಳಿಗೆ ಪರಿಹಾರವಾಗಿ ಶ್ರೀಸತ್ಯನಾರಾಯಣ ಪೂಜೆ ಕೈಗೊಳ್ಳುವುದು ಹಿಂದಿನಿAದಲೂ ಬಂದಿದೆ. ಈಗ ಸಮಾಜದಲ್ಲಿ ಸಾಮೂಹಿಕ ಪೂಜೆ ಕೈಗೊಂಡು ಉತ್ತಮ ಕಾರ್ಯ ಮಾಡಿದೆ ಎಂದರು.
ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿ, ಧರ್ಮಸ್ಥಳ ಟ್ರಸ್ಟ್ ಕೇವಲ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗದೇ ಕೆರೆ ಹೂಳು ತೆಗೆಯುವ ಕಾರ್ಯ ನಿರ್ವಹಿಸಿ ನೀರಾವರಿ ಕ್ಷೇತ್ರಕ್ಕೂ ತನ್ನ ಸೇವೆ ವಿಸ್ತರಿಸಿದೆ ಎಂದು ಹೇಳಿ ಬಳ್ಳಾರಿಯಲ್ಲಿ ಕೈಗೊಂಡ ನೀರಾವರಿ ಪ್ರಗತಿಯ ಮಾಹಿತಿ ನೀಡಿದರು.
ಜಿಲ್ಲಾ ನಿರ್ದೇಶಕ ಮೋಹನ ನಾಯಕ, ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರಪ್ಪ ಕುದರಿ ಮಾತನಾಡಿದರು. ಸಾನಿಧ್ಯ ವಹಿಸಿದ ಜಡಿಮಠದ ಜಡೇಸಿದ್ದೇಶ್ವರಶ್ರೀ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯಲ್ಲಿ ಭಕ್ತರು ದಂಪತಿಗಳ ಸಹಿತ ಪಾಲ್ಗೊಂಡು, ಅಶೋಕ ಜೋಷಿ ಮೂಲಕ ಪೂಜೆ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸದಸ್ಯ ಕಾಸುಗೌಡ ಬಿರಾದಾರ, ಸತ್ಯ ನಾರಾಯಣ ಪೂಜಾ ಸಮಿತಿಯ ಉಪಾಧ್ಯಕ್ಷ ಸೋಮಶೇಖರ ಹಿರೇಮಠ, ಕಲ್ಯಾಣ ಮಂಟಪ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ, ಸಿಂದಗಿ ಯೋಜನಾಧಿಕಾರಿ ಬಿನೋಯಿ, ಮೇಲ್ವಿಚಾರಕ ವಿಶ್ವನಾಥ ಸದಲಗೆ, ಬಸಪ್ಪ ದೇವಣಗಾಂವ, ಪಿ.ಎಸ್.ಮಿಂಚನಾಳ, ಜಿ.ಎಸ್. ಬಿರಾದಾರ(ಭೈರವಾಡಗಿ), ಜೆ.ಆರ್.ಬಿರಾದಾರ, ಸೋಮು ದೇವೂರ, ಕಾಸು ರಾಮಗೊಂಡ ಇದ್ದರು.

