ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಕರೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಕ್ಕಳು ಸಮಾಜದ ಅಂಕುಡೊಂಕು, ತಪ್ಪುಗಳನ್ನು ಪ್ರತಿರೋಧಿಸುವ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪ್ರೌಢಶಾಲೆಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವಿಜಯಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ಘಟಕ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಮಕ್ಕಳ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ಅದರಲ್ಲಿ ಹೆಣ್ಣುಮಕ್ಕಳು ಬಾಲ್ಯದಿಂದಲೇ ಶೋಷಣೆ, ಒತ್ತಡ, ನಿರ್ಲಕ್ಷö್ಯಕ್ಕೆ ಒಳಗಾಗಿ ಶಿಕ್ಷಣದಿಂದ ವಂಚಿತರಾಗುವ ಸಂದರ್ಭಗಳಿವೆ. ಆಗ ನಾವು ಇಂಥ ಘಟನೆಗಳ ಬಗ್ಗೆ ಅರಿಯಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಅರಿತು ಸಮಾಜದ ಪರಿಸರದಲ್ಲಿ ಆಗುವ ಬಾಲಕಾರ್ಮಿಕತೆ, ಬಾಲ್ಯವಿವಾಹದಂತಹ ತಪ್ಪುಗಳನ್ನು ಖಂಡಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಮ್ಮ ಇರುವಿಕೆಗೆ ಬೆಲೆ. ನಾವು ಶಿಕ್ಷಣ ಪಡೆಯುವುದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವದು ಹಾಗೂ ಸುರಕ್ಷತೆಯನ್ನು ಪಡೆಯುವುದು ಮುಖ್ಯ. ಇಂದಿನ ಮಕ್ಕಳು ಇಂದಿನ ಪ್ರಜೆಗಳು. ದೇಶದ ಪ್ರತಿ ಮಗು ವಿಶ್ವ ಒಡಂಬಡಿಕೆಯ ಮಕ್ಕಳ ಹಕ್ಕುಗಳ ಆಧಾರದ ಮೇಲೆ ಜೀವಿಸುವುದೇ ಪ್ರಮುಖ ಆದ್ಯತೆಯಾಗಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಮಾತನಾಡಿ, ಮಕ್ಕಳು ತಮ್ಮ ಪರಿಸರದಲ್ಲಿ ಎದುರಾಗುವ ಸಮಸ್ಯೆಗಳು, ತೊಂದರೆಗಳಿಗೆ ದೂರವಾಣಿ ಮೂಲಕ ಚೈಲ್ಡ್ಲೈನ್ ೧೦೯೮ ಗೆ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಮುಖ್ಯಶಿಕ್ಷಕ ವ್ಹಿ.ಎಂ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜು ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ, ಸಿಬ್ಬಂದಿ ರಮೇಶ ಕೋರಿ, ಬಿ.ಬಿ.ಬಿರಾದಾರ, ಎಸ್.ಎಮ್.ಕಿಣಗಿ, ಆಯ್.ಬಿ.ಬಿದರಿ, ಎ.ಪಿ.ಮಣೂರ, ಕೆ.ಬಿ.ಇಂಗಳಗಿ, ಸಂತೋಷ ಬಡಿಗೇರ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಇದ್ದರು.

