ಬರಡೋಲ ಗ್ರಾಮದ ದೇವಸ್ಥಾನದ ಶ್ರೀಶೈಲ ಮಲ್ಲಯ್ಯನ ನಂದಿಕೋಲಿನ ಚಮತ್ಕಾರ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಸುಪ್ರಸಿದ್ಧ ಬರಡೋಲ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ಮಲ್ಲಯ್ಯನ ದೇವಸ್ಥಾನದಲ್ಲಿ ನಂದೀಶ್ವರನ ಸಂಕೇತವಾಗಿರುವ ನಂದಿಕೋಲಿನ ಚಮತ್ಕಾರಿಕ ಮಹಿಮೆ ಎಲ್ಲೆಡೆ ಮನೆಮಾತಾಗಿದೆ.
ನಂದಿಕೋಲು(ಬಿದರಿನಿಂದ ಮಾಡಿದ ಕೋಲು) ಎಂದಾದರೂ ಕಲಿಯುಗದಲ್ಲೂ ಕೂಡಾ ಸ್ಥಳಕ್ಕೆ ತಕ್ಕಂತೆ ಹಿರಿದು ಹಾಗೂ ಕಿರಿದು ಆಗಲೂ ಸಾಧ್ಯವೆ?, ಬರಡೋಲ ಗ್ರಾಮದ ಶ್ರೀಶೈಲ ಮಲ್ಲಯ್ಯನ ನಂದಿಕೋಲಿನ ಚಮತ್ಕಾರ ಇಂದಿನ ವಿಜ್ಞಾನ ಲೋಕಕ್ಕೆ ಸವಾಲಾಗಿದ್ದು, ಭಕ್ತರಲ್ಲಿ ಭಕ್ತಿಭಾವ ಮತ್ತು ಅಚ್ಚರಿಯನ್ನು ಮೂಡಿಸಿದೆ.
ಉತ್ತರ ಕರ್ನಾಟಕದಿಂದ ಸಾವಿರಾರು ಭಕ್ತರು ಪ್ರತಿ ವರ್ಷ ಕಂಬಿ ಶ್ರೀಶೈಲ ಮಲ್ಲಯ್ಯ ಹಾಗೂ ನಂದಿಕೋಲನ್ನು ಹೊತ್ತುಕೊಂಡು ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕೆ ಕಾಲುನಡಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸುವ ಪರಂಪರೆ ಇದೆ. ಅದರಂತೆ ಬರಡೋಲ ಗ್ರಾಮದ ಪವಾಡಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿರುವ ಶ್ರೀಶೈಲ ಮಲ್ಲಯ್ಯನ ವಾಹನವಾಗಿರುವ ನಂದಿಯ ಸಂಕೇತದ ನಂದಿಕೋಲನ್ನು ಗ್ರಾಮಸ್ಥರು ಭಕ್ತಿಯಿಂದ 3 ವರ್ಷಕ್ಕೆ ಒಮ್ಮೆ ಶ್ರೀಶೈಲಕ್ಕೆ ಕೊಂಡೊಯ್ಯುತ್ತಾರೆ.
ನಂದಿಕೋಲು ಹಾಗೂ ಕಂಬಿ ಹೊತ್ತೊಯ್ಯುವ ಸ್ವಾಮಿಗಳಾದ ಧಾನಯ್ಯ ಕಂಟಿಕರ್ ಅವರು ಹೇಳುವಂತೆ ಸುಮಾರು 12ನೇ ಶತಮಾನದಿಂದಲೂ ಮುಂದುವರೆದುಕೊಂಡುಬಂದಿರುವ ಈ ಪರಂಪರೆಯಲ್ಲಿ ಬರಡೋಲ ಗ್ರಾಮದ ನಂದಿಕೋಲು ವಿಶೇಷ ಸ್ಥಾನ ಪಡೆದಿದೆ. ಸುಮಾರು 20 ಅಡಿ ಉದ್ದದ ನಂದಿಕೋಲನ್ನು ಕಂಬಿ ಮಲ್ಲಯ್ಯನ ಜೊತೆಗೆ ಗ್ರಾಮದ ಯುವಕರು ಕುಣಿಸುತ್ತಾ ಸಾಗಿಸುವುದು ಭಕ್ತರನ್ನು ಆಕರ್ಷಿಸುತ್ತದೆ. ಇತರೆ ಗ್ರಾಮಗಳ ನಂದಿಕೋಲಿಗಿಂತ ಬರಡೋಲ ಗ್ರಾಮದ ನಂದಿಕೋಲು ತನ್ನಿಂದ ತಾನೇ ಎತ್ತರವಾಗುವುದು ಹಾಗೂ ಗರ್ಭಗುಡಿಗೆ ಪ್ರವೇಶಿಸಿದಾಗ ಸ್ವಯಂವಾಗಿ ಕಿರಿದಾಗುವುದು ಇದರ ವಿಶೇಷತೆಯಾಗಿದೆ ಎಂದರು.
ಬರಡೋಲ ಗ್ರಾಮದ ಭಕ್ತ ಚೆನ್ನಪ್ಪ ಗೊಟ್ಯಾಳ ಅವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮೂರು ವರ್ಷಗಳ ಹಿಂದೆ ಮಲ್ಲಯ್ಯನ ದರ್ಶನಕ್ಕೆ ಕಂಬಿ ಹಾಗೂ ನಂದಿಕೋಲು ತೆಗೆದುಕೊಂಡು ಹೋಗಿಬಂದಿದ್ದರು. ಇಷ್ಟಾರ್ಥ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರು ಜನವರಿ 5 ರಂದು ಬಸ್ಸು ಹಾಗೂ ಖಾಸಗಿ ವಾಹನದಲ್ಲಿ ಸುಮಾರು 2,000 ಭಕ್ತರೊಂದಿಗೆ ಶ್ರೀಶೈಲಕ್ಕೆ ಹೋಗಿ ಪಾತಾಳಗಂಗೆಯಲ್ಲಿ ನಂದಿ ದೇವರಿಗೆ (ನಂದಿಕೋಲು) ಸ್ನಾನ ಮಾಡಿಸಿ ಶ್ರೀ ಮಲ್ಲಯ್ಯನ ದರ್ಶನ ಪಡೆದು, ಎಲ್ಲ ಭಕ್ತರು ತಮ್ಮ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡು ಮರಳಿ ಗುರುವಾರ ಬರಡೋಲ ಗ್ರಾಮಕ್ಕೆ ಬಂದರು. ಈ ಸಂದರ್ಭ ಬರಡೋಲ ಗ್ರಾಮದಲ್ಲಿ ಪುರವಂತರ ಕುಣಿತ ಹಾಗೂ ನಂದಿಕೋಲು ಕುಣಿತ ವಿಜ್ರಂಭಣೆಯಿಂದ ನಡೆದಿದ್ದು ಜನಮನ ಸೆಳೆಯಿತು.
ಸಾವಿರಾರು ಭಕ್ತರು ಸೇರಿ ಶ್ರೀ ಮಲ್ಲಯ್ಯನ ಗುಡಿಯ ಹತ್ತಿರ ನೆರೆದಿದ್ದರಿಂದ ಜಾತ್ರೆಯಂತೆ ದೃಶ್ಯ ಕಂಡುಬಂದಿತು. ನಂತರ ಪೂಜಾ–ಪುನಸ್ಕಾರಗಳ ಬಳಿಕ ನಂದಿಕೋಲನ್ನು ಗರ್ಭಗುಡಿಯಲ್ಲಿ ಇರಿಸಿದಾಗ ಅದು ತಕ್ಷಣವೇ ಕಿರಿದಾದುದು ಭಕ್ತರಲ್ಲಿ ಆಶ್ಚರ್ಯ ಮೂಡಿಸಿತು. ಕೆಲವು ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಹಿಂದು-ಮುಸ್ಲಿಮ್ ಎನ್ನದೆ ಬಂದ ಭಕ್ತರಿಗೆ ಪ್ರಸಾದ ಹಾಗೂ ಬದಾಮಿ ಹಾಲು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಬರಡೋಲ ಗ್ರಾ.ಪಂ.ಅಧ್ಯಕ್ಷ ಬಾಪುರಾಯ ಬಿರಾದಾರ ಗ್ರಾ.ಪಂ.ಸದಸ್ಯರಾದ ಹಸನಸಾಬ ಬಾಗವಾನ, ಇಮಾಮಸಾಬ್ ಹೊನ್ಮುರಗಿ, ಮಾಜಿ ಜಿ.ಪಂ. ಸದಸ್ಯ ಶ್ರೀಶೈಲ್ ಗೌಡ ಬಿರಾದಾರ, ರಾಜಶೇಖರ ಝಳಕಿ, ಚೆನ್ನಪ್ಪ ಗೊಟ್ಯಾಳ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅನೇಕ ಭಕ್ತರು ಉಪಸ್ಥಿತರಿದ್ದರು.
“ಭಕ್ತರ ನಂಬಿಕೆಯಂತೆ, ಗುಡಿಯ ಹೊರಗೆ ಸುಮಾರು 30 ಅಡಿ ಉದ್ದವಿರುವ ನಂದಿಕೋಲು ಗರ್ಭಗುಡಿ ಪ್ರವೇಶಿಸುತ್ತಿದ್ದಂತೆ ಕೂಡಲೇ ಸುಮಾರು 15 ಅಡಿಗಳಷ್ಟು ಕಿರಿದಾಗಿ ಬದಲಾಗುತ್ತದೆ. ಈ ಅಚ್ಚರಿಯ ಘಟನೆಗೆ “ಜೀವಂತ ನಂದಿ” ಅಥವಾ “ಜೀವಂತ ನಂದಿಕೋಲು” ಎಂಬ ಹೆಸರಿದೆ. ಈ ಚಮತ್ಕಾರ ಇಂದಿನ ಅತ್ಯಾಧುನಿಕ ವಿಜ್ಞಾನಕ್ಕೂ ಸವಾಲಾಗಿದ್ದು, ವಿಜ್ಞಾನಕ್ಕಿಂತ ಮೀರಿದ ದೇವರ ಮಹಿಮೆ ಎನ್ನಲಾಗುತ್ತಿದೆ. ಯಾರಾದರು ಭಕ್ತಿಭಾವದಿಂದ ಬೇಡಿಕೊಂಡರೆ ಅವರ ಇಷ್ಟಾರ್ಥಗಳು ಸಿದ್ದುಸುತ್ತವೆ.”
– ಗಜಾನಂದ ಪವಾರ
ಜಿ.ವ.ಸಂ.ಉಪಾಧ್ಯಕ್ಷರು

