ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ, ಆದ್ಯ ವಚನಕಾರರು, ಸತ್ಯ ಶರಣರು, ದಾಸ ಶ್ರೇಷ್ಠರು, ಸೂಫಿ ಸಂತರು, ತತ್ವಪದಕಾರರು, ದಾರ್ಶನಿಕರು, ಹಾಗೂ ಜನಪದರು ಈ ಮಣ್ಣಿನ ಕಣ ಕಣದಲ್ಲಿಯೂ ಕಂಗೊಳಿಸುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ, ಪ್ರಹ್ಲಾದಚಾರ್ಯ ಜೋಶಿ ಹೇಳಿದರು.
ಪಟ್ಟಣದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ರವಿವಾರ ಸಂಜೆ ವಲಯ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ‘2024-25 ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಮಾಹಿತಿ ತಂತ್ರಜ್ಞಾನ ಬೆಳೆದಂತೆ ಸಾಹಿತ್ಯ, ಕಲೆ, ಸಂಗೀತ, ನೃತ್ಯ, ನಾಟಕ, ಬಯಲಾಟ, ಡೊಳ್ಳು ಕುಣಿತ ಮತ್ತು ವೀರಗಾಸೆ, ಹಂತಿ ಪದಗಳು, ಜನಪದ ಸಂಸ್ಕೃತಿ ಕಣ್ಮರೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು ಯುವಪೀಳಿಗೆ ಹಾಗೂ ಸಾಹಿತ್ಯ ಪರಿಷತ್ತು ಮುಂದಿನ ಜನಾಂಗಕ್ಕೆ ಪರಿಚಯಿಸುವ ಮೂಲಕ ಕವಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮುಂದುವರಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದವರು, ಎಲೆಮರೆಯ ಕಾಯಿಯಂತೆ ಇರುವ ನನ್ನನು ಗುರುತಿಸಿ ‘ವರ್ಷದ ವ್ಯಕ್ತಿ ಪ್ರಶಸ್ತಿ’ ನೀಡಿ ಗೌರವಿಸಿದ್ದು ನನಗೆ ಅತೀವ ಸಂತಸ ತಂದಿದೆ. ತಮ್ಮೆಲ್ಲರ ಪ್ರೀತಿ ಅಭಿಮಾನ ಹಾರೈಕೆ ಹೀಗೆ ಇರಲಿ ಎಂದು ಆಶಿಸಿದರು.
ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ ಪ್ರಶಸ್ತಿ ಪುರಸ್ಕಾರ ಬಿರುದುಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ತು ಸೂಕ್ತ ವ್ಯಕ್ತಿಯನ್ನು ಗುರುತಿಸಿರುವುದು ಶ್ಲಾಘನೀಯ, ಹಿರಿಯರ ಮಾರ್ಗದರ್ಶನ ಪಡೆದು ಸಾಹಿತಿಗಳು, ಸಂಶೋಧಕರು ಇಲ್ಲಿಯ ಐತಿಹಾಸಿಕ ಸ್ಥಳಗಳು ಮೇಲೆ ಬೆಳಕು ಚೆಲ್ಲುವ ಕಾರ್ಯಕ್ಕೆ ಮುಂದಾಗಿಲಿ ಎಂದರು.
ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಹೆಗ್ಗನದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಮುಖರಾದ ಚೆನ್ನಯ್ಯ ಸ್ವಾಮಿ ಚಿಕ್ಕಮಠ, ಪುರಸಭೆ ಸದಸ್ಯ ಸುಧಾಕರರಡ್ಡಿ ಡಿಗ್ಗಾವಿ, ಹಿರಿಯ ಪತ್ರಕರ್ತ ಸಂಜೀವರಾವ್ ಕುಲ್ಕರ್ಣಿ, ನಿವೃತ್ತ ಉಪನ್ಯಾಸಕ ನರಸಿಂಹರಾವ್ ಕುಲ್ಕರ್ಣಿ, ಟಿ ಜಿ ಜೋಷಿ, ರಾಮನಗೌಡ ಪೋಲೀಸ್ ಪಾಟೀಲ್, ನಿಂಗನಗೌಡ ದೇಸಾಯಿ, ನಾಗರತ್ನ ಓಂಕಾರ, ಪಾರ್ವತಿ ಬುದೂರು, ಬಿ ಗುಡಿ ಕಸಾಪ ಅಧ್ಯಕ್ಷ ಶರಣಬಸವ ಸೈದಾಪುರ ಸೇರಿದಂತೆ ಅನೇಕರು ಮಾತನಾಡಿ ಶುಭಹಾರೈಸಿದರು.
ಹಳ್ಳೇರಾವ್ ಕುಲ್ಕರ್ಣಿ ಪ್ರಾಸ್ತಾವಿಕ ಮಾತನಾಡಿದರು, ಬಂದೇನವಾಜ್ ನಾಲತವಾಡ ಸ್ವಾಗತಿಸಿದರು, ಡಾ ಯಂಕನಗೌಡ ಪಾಟೀಲ ನಿರೂಪಿಸಿದರು, ವಿಜಯಾಚಾರ್ಯ ಪುರೋಹಿತ ವಂದಿಸಿದರು. ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

