ಚಡಚಣ ಎಸ್.ಎಸ್.ಎಚ್ ಶಾಲೆಯಲ್ಲಿ ಖಾದ್ಯ ಮೇಳ ಉದ್ಘಾಟಿಸಿದ ಸಂಸ್ಥೆ ಅಧ್ಯಕ್ಷ ಶಂಕರ ಹಾವಿನಾಳ ಸಲಹೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಶ್ರೀ ಎಸ್.ಎಸ್.ಎಚ್. ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಖಾದ್ಯ ಪದಾರ್ಥಗಳ ಮಾರಾಟ ಮೇಳ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಶಂಕರ ಹಾವಿನಾಳ ಖಾದ್ಯ ಮೇಳ ಉದ್ಘಾಟಿಸಿ ಮಾತನಾಡಿ, ಇವತ್ತಿನ ಆಧುನಿಕ ಕಾಲದಲ್ಲಿ ವಿಜ್ಞಾನ ತಂತ್ರಜ್ಞಾನ ಶೀಘ್ರ ಗತಿಯಲ್ಲಿ ಬೆಳೆಯುತ್ತಿದ್ದು, ಮಕ್ಕಳಿಗೆ ಉದ್ಯೋಗಕ್ಕಾಗಿ ವ್ಯಾಪಾರ ವಹಿವಾಟು ಮತ್ತು ಲಾಭ ನಷ್ಟಗಳ ಅರಿವು ಅತೀ ಅವಶ್ಯವಾಗಿದೆ ಎಂದ ಅವರು, ಎಲ್ಲವೂ ಬೋಧನೆಯಿಂದ ಈಡೇರಿಸುವುದು ಅಸಾಧ್ಯ. ಆದರೆ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗಳಿಗೆ ತಕ್ಕಂತೆ ಹವ್ಯಾಸ ಬೆಳೆಸಿಕೊಳ್ಳುವ ಮನೋಭಾವ ಹೊಂದಬೇಕು ಎಂದರು.
ಖಾದ್ಯ ತಿನಿಸುಗಳಾದ ಪಾನಿಪುರಿ, ಭೇಳ, ಸ್ಯಾಂಡವಿಚ್, ಕ್ಯಾರೇಟ್ ಹಲ್ವಾ, ಭಂಡಗ, ಖಾರಶೇಂಗಾ, ಫ್ರುಟ್ ಸಲಾಡ್, ಜ್ಯೂಸ್, ಮಿರ್ಜಿಭಜಿ, ಬಟಾಟಿ ಭಜಿ, ಗೋಬಿ ಮಂಚೂರಿ, ಮ್ಯಾಗಿ, ಚೂಡಾ, ಸಮೋಸಾ, ಕರದಂಟು, ಫೈನಾಪಲ್, ವಡಾಪಾವ್, ಮಿಸಾಳ್ ಪಾವ, ಮೈಸೂರಪಾಕ್, ಬೊಂಡಾ, ಫ್ಲಾವರ್ ಮಂಚೂರಿ, ಬದಾಮಿ ಹಾಲು, ಚಿಪ್ಸ್, ಜಾಮೂನ್, ಪಾಪ್ಕಾರ್ನ್, ವೆಜ್ ಬಿರ್ಯಾನಿ ಮುಂತಾದವುಗಳನ್ನು ಶಾಲೆಯ ಮಕ್ಕಳು ತಯಾರಿಸಿ, ಮಾರಾಟ ಮಾಡಿ ವಿದ್ಯಾರ್ಥಿಗಳು ನೋಡುಗರ ಗಮನ ಸೆಳೆದರು.
ಮಾರಾಟ ಮೇಳದಲ್ಲಿ ಶಾಲೆಯ ವಿದ್ಯಾಥಿಗಳು, ಶಿಕ್ಷಕರು, ಪಾಲಕರು, ಶಾಲಾ ಅಧ್ಯಕ್ಷರು, ಕಾರ್ಯದರ್ಶಿ, ಮುಖ್ಯಗುರುಗಳು, ಸಹಶಿಕ್ಷಕರು, ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.

