ಬಸಾಪುರ ಗ್ರಾಮಸಭೆಯಲ್ಲಿ ಸಂತ್ರಸ್ತರ ಅಳಲು | ಸಾಗುವಳಿ ಪತ್ರಕ್ಕೆ ಮನವಿ
ಉದಯರಶ್ಮಿ ದಿನಪತ್ರಿಕೆ
ಸರಗೂರು: ಪ್ರತಿ ಗ್ರಾಮದ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮಸಭೆ ವಿಧಾನಸಭೆ ಆಗಬೇಕು. ಶಾಸಕರ ಇಚ್ಛಾಶಕ್ತಿ ಕೊರತೆ ಮತ್ತು ಸಮಯದ ಅಭಾವದಿಂದ ರೈತರ ಸಮಸ್ಯೆಗಳು ವಿಧಾನಸಭೆಯಲ್ಲಿ ಚರ್ಚೆಗೆ ಬರುವುದು ತೀರಾ ಕಡಿಮೆ. ಈ ನಿಟ್ಟಿನಲ್ಲಿ ಗ್ರಾಮಸಭೆಗೆ ಒಂದು ಅಧಿಕಾರ ಕೊಡಲಾಗಿದೆ. ರೈತರ ಜ್ವಲಂತ ಸಮಸ್ಯೆಗಳು ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆಯಾಗಿ, ಶೀಘ್ರದಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮಸಭೆ ವಿಧಾನಸಭೆ ಆಗಬೇಕು ಎಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನ್ ಗೌಡ ಸಿ ಒತ್ತಾಯಿಸಿದರು.
ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಭೂಮಿಪುತ್ರ ಚಂದನ್ ಗೌಡ, ಕಬಿನಿ ನೀರಿಗೆ ಆಣೆಕಟ್ಟು ನಿರ್ಮಾಣ ಮಾಡುವಾಗ ಅಲ್ಲಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಯಿತು. ಆದರೆ ಇಲ್ಲಿಯವರೆಗೆ ಸಾಗುವಳಿ ಪತ್ರ ವಿತರಣೆ ಮಾಡಿಲ್ಲ. ಕಳೆದ 5 ದಶಕಗಳಿಂದಲೂ ಬಸಾಪುರ ಗ್ರಾಮದ ರೈತರು ಸಾಗುವಳಿ ಪತ್ರ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ ಇಲ್ಲಿಯವರಿಗೆ ಅರಣ್ಯ ಇಲಾಖೆಯಿಂದ ಎನ್ಒಸಿ ಸಿಕ್ಕಿಲ್ಲ. ಇದರಿಂದ ಬೇಸತ್ತಿರುವ ಗ್ರಾಮಸ್ಥರು ನಮ್ಮ ರೈತ ಕಲ್ಯಾಣ ಸಂಘದ ಗಮನಕ್ಕೆ ತಂದಾಗ, ಸರಗೂರು ದಂಡಾಧಿಕಾರಿ ಮೋಹನಕುಮಾರಿ ಹಾಗು ಸ್ಥಳೀಯ ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸಭೆ ಆಯೋಜಿಸಿ, ರೈತರ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದೆ. ರೈತರು ಕೂಡಾ ತಮ್ಮ ನೋವು, ಅಳಲು ತೋಡಿಕೊಂಡಿದ್ದಾರೆ. ಶೀಘ್ರದಲ್ಲೇ ಇದನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳೋದಾಗಿ ತಹಸೀಲ್ದಾರ್ ಮೋಹನಕುಮಾರಿ ಹಾಗೂ ಅರಣ್ಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವರೆಗೂ ರೈತ ಕಲ್ಯಾಣ ಸಂಘ ಬೆಂಬಲಕ್ಕೆ ನಿಲ್ಲಲಿದೆ ಎಂದು ಭೂಮಿಪುತ್ರ ಚಂದನ್ ಗೌಡ ಭರವಸೆ ನೀಡಿದರು.
ಗ್ರಾಮಸಭೆಯಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಅಮೃತೇಶ್, ಪ್ರವೀಣ್ ಕುಮಾರ್, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ತಾಲೂಕು ಅಧ್ಯಕ್ಷರಾದ ಲೋಕೇಶ್ ಗೌಡ, ಉಮೇಶ್ ಹೈರಿಗೆ, ಸತೀಶ್ ಸಾಗರೆ, ಮಂಚಯ್ಯ, ಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಬಸಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.
ತಹಸೀಲ್ದಾರ್ ಮುಂದೆ ಸಂತ್ರಸ್ತರ ನೋವು
1955 ರಲ್ಲಿ ಕಬಿನಿ ಜಲಾಶಯ ನಿರ್ಮಾಣಕ್ಕಾಗಿ ನಮ್ಮನ್ನು ಬಸಾಪುರ (ಕಿತ್ತೂರು) ಗ್ರಾಮಕ್ಕೆ ಸ್ಥಳಾಂತರ ಮಾಡಲಾಯಿತು. ಆದರೆ ಕಳೆದ ೫ ದಶಕಗಳಿಂದಲೂ ಮುಳುಗಡೆ ಸಂತ್ರಸ್ತರ ಕೃಷಿ ಭೂಮಿಗೆ ( ಸರ್ವೇ ನಂಬರ್ 250 -251) ಸಾಗುವಳಿ ಪತ್ರ ಕೊಟ್ಟಿಲ್ಲ. ಸಾಗುವಳಿ ಪತ್ರ ಇಲ್ಲದ ಹಿನ್ನೆಲೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿ ಹೋಗಿದ್ದೇವೆ. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಹೇಳುತ್ತಾರೋ ಹೊರತು ಸಾಗುವಳಿ ಪತ್ರ ಕೊಡುತ್ತಿಲ್ಲ. ಅದರಿಂದ ನಮಗೆ ಜೀವನವೇ ಬೇಸರವಾಗಿದೆ ಎಂದು ರೈತ ರವಿ ಅವರು ತಹಸೀಲ್ದಾರ್ ಮೋಹನಾಕುಮಾರಿ ಮುಂದೆ ಅಳಲು ತೋಡಿಕೊಂಡರು.
ಅರಣ್ಯ ಇಲಾಖೆ ಹೇಳೋದೇನು?
ಸರ್ವೇ ನಂ. 250 -251 ರಲ್ಲಿರುವ ಜಮೀನುಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿ ಯಾವುದೇ ಸಂರಕ್ಷಿತ ಅರಣ್ಯ ಪ್ರದೇಶ ಇರುವುದಿಲ್ಲ. ರೈತರಿಗೆ ಸಾಗುವಳಿ ಪತ್ರ ವಿಸ್ತರಿಸಲು ನಮ್ಮ ಯಾವುದೇ ಅಭ್ಯಂತರವಿಲ್ಲ. ಮುಳುಗಡೆಯಾದ ಸಂದರ್ಭದಲ್ಲಿ 1969ರಲ್ಲಿ ಅಂದಿನ ಕಮಿಷನರ್ ಎಷ್ಟು ಮುಳುಗಡೆಯಾಗಿದ್ದೇಯೋ ಅಷ್ಟೂ ಜಮೀನನ್ನು ಸಂತ್ರಸ್ತರಿಗೆ ಬಿಟ್ಟುಕೊಡಬೇಕೆಂದು ಆದೇಶ ಹೊರಡಿಸಿದ್ದರು. ಅದರಂತೆ ಜಮೀನು ಹಸ್ತಾಂತರ ಮಾಡಲಾಗಿದೆ. ಆದರೆ ಇತ್ತೀಚಿಗೆ ತಂದಿರುವ ಅರಣ್ಯ ಕಾಯ್ದೆ ಪ್ರಕಾರ, ಡಿನೋಟಿಫೈ ಮಾಡಿದ್ರೆ ಒಳ್ಳೇದು ಎಂದು ಹೇಳಲಾಗುತ್ತೆ. ಈ ಕಾರಣದಿಂದ ಡಿನೋಟಿಫೈ ಮಾಡಬೇಕು ಎಂದು ಕಂದಾಯ ಇಲಾಖೆಗೆಪತ್ರ ಬರೆದಿದ್ದೇವೆ ಎಂದು ಬೇಗೂರು ವಲಯ ಅರಣ್ಯಾಧಿಕಾರಿ ಅಮೃತೇಶ್, ಪ್ರವೀಣ್ ಕುಮಾರ್ ಸ್ಪಷ್ಟಪಡಿಸಿದ್ದರು.
ಸರಗೂರು ತಹಸೀಲ್ದಾರ್ ಹೇಳೋದೇನು?
ಸರ್ವೇ ನಂ 250 ಮತ್ತು 251 ರಲ್ಲಿರುವ ರೈತರಿಗೆ ಸಾಗುವಳಿ ಪತ್ರ ವಿತರಣೆ ಸೇರಿದಂತೆ ಪುನರ್ವಸತಿ ಕಲ್ಪಿಸಲು ತಮ್ಮದೇನು ತಕರಾರು ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಪತ್ರದಲ್ಲಿ ಡಿನೋಟಿ ಪೈ ಮಾಡಬೇಕೇನೋ ಎಂದು ಸಲಹೆ ನೀಡಿರುವುದರಿಂದ ಜನವರಿ 12 ರಂದು ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ. ಅಲ್ಲಿಂದ ಯಾವುದೇ ತಕರಾರು ಇಲ್ಲ ಎಂದು ಹೇಳಿದ್ದರೆ, ಶೀಘ್ರದಲ್ಲೇ ಸಾಗುವಳಿ ಪತ್ರ ವಿತರಣೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ತಹಸೀಲ್ದಾರ್ ಮೋಹನಕುಮಾರಿ ಭರವಸೆ ನೀಡಿದರು.
“ಸರ್ಕಾರದಿಂದ ಜಮೀನು ಪಡೆದಿರುವ ರೈತರು, ಅಕ್ಕಪಕ್ಕದ ಜಮೀನಿನ ರೈತರಿಗೆ ಓಡಾಡಲು ತೊಂದರೆ ಕೊಡುವಂತಿಲ್ಲ. ನಮ್ಮ ಹೆಸರಿಗೆ ದರಖಾಸ್ತು ಪೋಡಿ ಆಗಿದೆ, ನಮ್ಮನ್ನ ಯಾರೂ ಏನು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ರಸ್ತೆ ಬಿಡದೆ ತೊಂದರೆ ಕೊಟ್ಟರೆ, ಯಾವುದೇ ಮುಲಾಜಿಲ್ಲದೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ.”
– ಮೋಹನಕುಮಾರಿ
ಸರಗೂರು ದಂಡಾಧಿಕಾರಿ

