ಏಳು ದಿನಗಳ ಕಾಲ ವೈಭವದಿಂದ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತರ ಕರ್ನಾಟಕದ ಅಂದದ-ಚೆಂದದ ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಇದೇ ದಿನಾಂಕ ೧೧ ರಿಂದ ಏಳು ದಿನಗಳ ಕಾಲ ವೈಭವದಿಂದ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಶನಿವಾರ ನಗರ ಶಾಸಕ ಹಾಗೂ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹಾಗೂ ಶ್ರೀ ಸಿದ್ದೇಶ್ವರ ಸಂಸ್ಥೆಯ ಸರ್ವ ನಿರ್ದೇಶಕರ ಸಮ್ಮುಖದಲ್ಲಿ ಚೇರಮನ್ ಬಸಯ್ಯ ಹಿರೇಮಠ ಸಮಗ್ರ ವಿವರಣೆ ನೀಡಿದರು.
ಜ.೧೧ ರಂದು ಶ್ರೀ ಸಿದ್ದೇಶ್ವರ ದೇವಾಲಯದಿಂದ ನಂದಿ ಧ್ವಜ ಹಾಗೂ ಗೋಮಾತೆಯ ಮೆರವಣಿಗೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಕಲಿದ್ದು, ಈ ಮೆರವಣಿಗೆ ಸಿದ್ದೇಶ್ವರ ದೇವಾಲಯ, ಅಟಲ್ ಬಿಹಾರಿ ವಾಜಪೇಯಿ ರಸ್ತೆ ಮಾರ್ಗವಾಗಿ ಸಾಗಿ ಚತುರ್ಮುಖ ಗಣಪತಿ ದೇವಾಲಯಕ್ಕೆ ತಲುಪಲಿದೆ. ಆ ಮೂಲಕ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ಹಿರೇಮಠ ವಿವರಿಸಿದರು.
ದಿ.೧೨ ರಂದು ನಂದಿ ಧ್ವಜಗಳ ಉತ್ಸವ ಹಾಗೂ ೭೭೦ ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ನಡೆಯಲಿದೆ. ರಾತ್ರಿ ೮ ಕ್ಕೆ ದೇವಾಲಯದ ಆವರಣದಲ್ಲಿ ಭಜನೆ ನಡೆಯಲಿದೆ.
ದಿ.೧೩ ರಂದು ಮಧ್ಯಾಹ್ನ ೧೨.೩೦ ಕ್ಕೆ ಅಕ್ಷತಾರ್ಪಣೆ – ಭೋಗಿ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಸಿದ್ದೇಶ್ವರ ದೇವಾಲಯದ ಎದುರು ವಿಧಿ-ವಿಧಾನಗಳೊಂದಿಗೆ ಚರಿತ್ರೆ ಓದುವ ಕಾರ್ಯಕ್ರಮ ಹಾಗೂ ನಂತರ ಯೋಗ ದಂಡಕ್ಕೆ ಅಕ್ಷತೆ ಕಾರ್ಯಕ್ರಮ, ಪ್ರಸಾದ ವಿತರಣೆ ನಡೆಯಲಿದೆ, ರಾತ್ರಿ ೮ ಕ್ಕೆ ದೇವಾಲಯದ ಆವರಣದಲ್ಲಿ ಅರ್ಥಪೂರ್ಣ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದರು. ಜ.೧೪ ರಂದು ಹೋಮ-ಹವನ ಹಾಗೂ ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ ನಡೆಯಲಿದೆ. ದಿ.೧೫ ರಂದು ನಂದಿ ಧ್ವಜಗಳ ಭವ್ಯ ಮೆರವಣಿಗೆ ನಡೆಯಲಿದ್ದು, ರಾತ್ರಿ ೮ ರಿಂದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ, ದಿ.೧೬ ರಂದು ಬೆಳಿಗ್ಗೆ ೧೧ ಕ್ಕೆ ಭಾರ ಎತ್ತುವ ಸ್ಪರ್ಧೆ ನಡೆಯಲಿದೆ, ದಿ.೧೭ ರಂದು ಮಧ್ಯಾಹ್ನ ೩ ಕ್ಕೆ ಎಸ್.ಎಸ್. ಹೈಸ್ಕೂಲ್ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿಗಳು ಜರುಗಲಿವೆ ಎಂದು ವಿವರಿಸಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಮಾತನಾಡಿ, ಜಾತ್ರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಸಂಘಟಿಸಲು ಅನೇಕ ದಿನಗಳಿಂದ ತಯಾರಿ ನಡೆದಿದ್ದು, ಅನೇಕ ಸಮಿತಿ, ಉಪ ಸಮಿತಿಗಳನ್ನು ರಚಿಸಲಾಗಿದೆ, ೧೮೯೮ ರಲ್ಲಿ ಆರಂಭವಾದ ಸಿದ್ದೇಶ್ವರ ಸಂಸ್ಥೆ ಶತಮಾನೋತ್ಸವ ಕಂಡ ಸಂಸ್ಥೆಯಾಗಿದೆ, ಪ್ರಸ್ತುತ ೧೦೮ ನೇ ವರ್ಷದ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಲಿದೆ ಎಂದರು.
ಅಂತಾರಾಷ್ಟ್ರೀಯ ಜಂಗಿ ನಿಕಾಲಿ ಕುಸ್ತಿ ಜ.೧೭ ರಂದು
ಈ ಬಾರಿ ಜಾತ್ರಾ ಮಹೋತ್ಸವ ಪ್ರಯುಕ್ತ ನಗರದ ಎಸ್.ಎಸ್. ಹೈಸ್ಕೂಲ್ ಮೈದಾನದಲ್ಲಿ ಇದೇ ದಿ.೧೭ ರಂದು ಮಧ್ಯಾಹ್ನ ೩ ಗಂಟೆಯಿಂದ ಅಂತಾರಾಷ್ಟ್ರೀಯ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ.
ರಷ್ಯಾದ ತಾಪಸಿವ್ ಟ್ಯಾಮರಲಾನ್, ಕುಬೇವ್ ಮುರ್ಟೋವಿಚ್, ಪಂಜಾಬ್‌ದ ರಸ್ಸಿ ಸಿಂಗ್, ಅಯೋಧ್ಯಾದ ಪೈ. ಹರೀಶಕುಮಾರ, ಬೆಳಗಾವಿಯ ಕಾಮೇಶ ಪಾಟೀಲ, ವಿಕ್ರಾಂತ ಮಹಾನ್ ಸೇರಿದಂತೆ ಅನೇಕ ಪ್ರಸಿದ್ಧ ಕುಸ್ತಿಪಟುಗಳು ಪಾಲ್ಗೊಳ್ಳಿದ್ದು, ಸ್ಥಳೀಯ ಹಾಗೂ ನೆರೆಯ ಜಿಲ್ಲೆಯ ಅನೇಕ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪ್ರಮುಖರಾದ ಸಿದ್ದರಾಮಪ್ಪ ಉಪ್ಪಿನ, ಶ್ರೀ ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂ.ಗು. ಸಜ್ಜನ, ನಿರ್ದೇಶಕರಾದ ಗುರು ಗಚ್ಚಿನಮಠ, ಸದಾನಂದ ದೇಸಾಯಿ, ಬಸವರಾಜ ಸೂಗುರ, ಮಲ್ಲಿಕಾರ್ಜುನ ಸಜ್ಜನ, ಶಿವಾನಂದ ನೀಲಾ, ಸಂಗನಗೌಡ ನಾಡಗೌಡ, ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ ಮೊದಲಾದವರು ಪಾಲ್ಗೊಂಡಿದ್ದರು.


