ಸೊಲಾಪೂರದಲ್ಲಿ ನಡೆದ ಕಾರ್ಯಾಗಾರದಲ್ಲಿ ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಪೋರೇಟ್ ಜಗತ್ತಿನಲ್ಲಿ ಉದ್ಯೋಗಿಗಳು ತಮ್ಮ ಸ್ವಂತ ಭಾವನೆಗಳನ್ನು ಅರ್ಥೈಸಿಕೊಂಡು ಇತರ ಸಹದ್ಯೋಗಿಗಳ ಶಕ್ತಿ-ಸಾಮರ್ಥ್ಯ ಗುರುತಿಸಿ, ಒತ್ತಡ ನಿವಾರಣೆ, ಪರಿಣಾಮಕಾರಿ ಸಂವಹನ, ಸಹಾನುಭೂತಿ ಮತ್ತು ಸವಾಲುಗಳನ್ನು ನಿಭಾಯಿಸಲು ಭಾವನಾತ್ಮಕ ಬುದ್ಧಿಮತ್ತೆ ಪ್ರಮುಖ ಪಾತ್ರವಹಿಸುತ್ತದೆ ಎಂದು ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ಮಹಾರಾಷ್ಟ್ರದ ಸೋಲಾಪೂರದ ಅಹಲ್ಯಾಬಾಯಿ ಹೋಳ್ಕರ ಸೋಲಾಪೂರ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ನಿರ್ವಹಣೆ ವಿಭಾಗದಡಿಯಲ್ಲಿ “ಕಾರ್ಪೋರೇಟ್ ಜಗತ್ತಿನಲ್ಲಿ ಭಾವನಾತ್ಮಕ ಬುದ್ಧಿಮತ್ತೆ” ವಿಷಯ ಕುರಿತು ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಕಂಪನಿಯಲ್ಲಿ ಉದ್ಯೋಗಿಯು ತನ್ನ ಆತ್ಮ ಅರಿವು, ಸ್ವಯಂ ನಿಯಂತ್ರಣ, ಸಾಮಾಜಿಕ ಅರಿವು ಮತ್ತು ಸಂಬಂಧ ನಿರ್ವಹಣೆಯಂತಹ ಭಾವನಾತ್ಮಕ ಬುದ್ಧಿಮತ್ತೆಯ ಅಂಶಗಳು ನಾಯಕತ್ವ ಮತ್ತು ಉದ್ಯೋಗಿಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಮತ್ತು ಯಶಸ್ವಿಗೆ ಅಡಿಪಯವಾಗಲಿವೆ. ಭಾರತದ ವೇಗವಾಗಿ ಬೆಳೆಯುತ್ತಿರುವ ಕಾರ್ಪೋರೇಟ್ ಕ್ಷೇತ್ರದಲ್ಲಿ ಕೇವಲ ತಾಂತ್ರಿಕ ಕೌಶಲ್ಯಗಳು ಸಾಲದು. ಇದು ನೌಕರರು ತಮ್ಮ ಮತ್ತು ಸಹದ್ಯೋಗಿಗಳ ಫಲಿತಾಂಶ ಪೂರಿತ ಕೆಲಸ ನಿರ್ವಹಣೆ ಮತ್ತು ವೃತ್ತಿ ಜೀವನಕ್ಕೆ ಮತ್ತು ಸಂಸ್ಥೆಯ ಅಭಿವೃದ್ಧಿಗೆ ಮೂಲಾಧಾರವಾಗಿದೆ ಎಂದರು.
ಈ ಗೋಷ್ಠಿಯ ವೇದಿಕೆಯ ಮೇಲೆ ಅಹಲ್ಯಾಬಾಯಿ ಹೋಳ್ಕರ ವಿಶ್ವವಿದ್ಯಾಲಯ, ಸೋಲಾಪೂರ ಕುಲಪತಿಗಳಾದ ಪ್ರೊ. ಪ್ರಕಾಶ ಮಹಾನವರ, ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ವನಿತಾ ಸಾವಂತ, ಮ್ಯಾನೇಜಮೆಂಟ್ ವಿಭಾಗದ ಮುಖ್ಯಸ್ಥ ಡಾ. ಅತುಲ್ ಲೋಖಂಡೆ, ಡಾ. ಸುಚಿತ್ರಾ ಲಭಾನೆ, ಡಾ. ರಶ್ಮೀ ದಾತಾರ ಇನ್ನಿತರರು ವೇದಿಕೆಯ ಮೇಲಿದ್ದರು.

